KJP re entering into politics?- ಕೆಜೆಪಿ ಮತ್ತೆ ಉದಯ? ಜೆಡಿಎಸ್ ಮೈತ್ರಿ ಸಾಧ್ಯತೆ !- ಏನೇನಾಗಲಿದೆ ರಾಜ್ಯ ರಾಜಕಾರಣ!
ಕೆಜೆಪಿ ಮತ್ತೆ ಉದಯ? ಜೆಡಿಎಸ್ ಮೈತ್ರಿ ಸಾಧ್ಯತೆ !- ಏನೇನಾಗಲಿದೆ ರಾಜ್ಯ ರಾಜಕಾರಣ!
2023ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕೆಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಹೊಸ ಸರ್ಕಾರ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
2023ರ ಚುನಾವಣೆಯನ್ನು ಎದುರಿಸಲು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಈಗಾಗಲೇ ಸಿದ್ಧತೆ ನಡೆಸಿದೆ. 'ಮಿಷನ್ 123' ಎಂಬ ಮಂತ್ರದೊಂದಿಗೆ ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಗೆ ರೆಡಿಯಾಗುತ್ತಿದೆ.
'ಮಿಷನ್ 123 ನಮ್ಮ ಗುರಿಯಲ್ಲ, ಛಲ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಈ ನಡುವೆ ಕೆಜೆಪಿ ರಾಜ್ಯದಲ್ಲಿ ಪುನರ್ ಸ್ಥಾಪನೆಗೊಳ್ಳಲಿದೆ ಎಂಬ ಚರ್ಚೆ ಶುರುವಾಗಿದೆ.
ಈ ಹೊಸ ಚರ್ಚೆಗೆ ಮುನ್ನುಡಿ ಬರೆದದ್ದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್. ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲ ಎನ್ನುವಂತೆ ಕಿಮ್ಮನೆ ಅವರು ಸುಮ್ಮನೆ ಈ ವಿಚಾರ ಪ್ರಸ್ತಾಪಿಸಿಲ್ಲ. ಅವರಿಗೆ ಈ ಬಗ್ಗೆ ಖಚಿತ ಮಾಹಿತಿ ಇದೆ ಎನ್ನಲಾಗಿದೆ.
2023ರ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ಧವಾಗಿದೆ. ಒಂದೆಡೆ ರಾಜ್ಯ ಬಿಜೆಪಿ ಮುಂದಿನ ಚುನಾವಣೆಗೆ ಮತಾಂತರ ಎಂಬ ವಿಚಾರವನ್ನು ಎತ್ತಿಕೊಂಡಿದೆ. ಕಾಂಗ್ರೆಸ್ ಬೆಲೆ ಏರಿಕೆ, ರೈತ ಹೋರಾಟ, ದೇವಾಲಯ ಧ್ವಂಸ ಮೊದಲಾದ ವಿಚಾರಗಳನ್ನು ಎತ್ತಿಕೊಂಡಿದೆ.
ಜೆಡಿಎಸ್ ಸರಣಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದು, 2023ರ ಚುನಾವಣೆ ಎದುರಿಸಲು ರಣತಂತ್ರ ರೂಪಿಸಿದೆ.
ಕೆಜೆಪಿಯ ಆಗಮನ ರಾಜ್ಯ ರಾಜಕೀಯದಲ್ಲಿ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಬಹುದು ಎನ್ನಲಾಗಿದೆ.