
ಕೆಎಸ್ಆರ್ಟಿಸಿ ಬಸ್ ಅನ್ನೇ ಕದ್ದೊಯ್ದ ಖದೀಮ ಕಳ್ಳರು!
Tuesday, October 19, 2021
ತುಮಕೂರು: ಲೋಕದಲ್ಲಿ ಎಂಥಂಥಾ ಕಳ್ಳರಿರುತ್ತಾರೆ ಎಂದು ಎಣಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲೊಂದು ಕಡೆ ನಿಲ್ಲಿಸಿರುವ ಕೆಎಸ್ಆರ್ಟಿಸಿ ಬಸ್ ಅನ್ನೇ ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.
ಕಳ್ಳರು ಬಸ್ ನಲ್ಲಿ ಹಲವೆಡೆ ಸುತ್ತಾಡಿ ಮತ್ತೆ ಪಕ್ಕದ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ. ಇಂತಹ ವಿಚಿತ್ರ ಘಟನೆಯೊಂದು ನಡೆದಿರೋದು ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ.
ಈ ಕೆಎಸ್ಆರ್ಟಿಸಿ ಬಸ್ ಅನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಬಸ್ ನಿಲ್ದಾಣದಿಂದಲೇ ನಿಂತಿರುವ ಬಸ್ ಅನ್ನು ಸೋಮವಾರ ಕಳ್ಳರು ಕದ್ದೊಯ್ದಿದ್ದಾರೆ. ಕುಣಿಗಲ್ ತಾಲೂಕಿನ ಅಮೃತೂರು, ಯಡಿಯೂರು ಸುತ್ತಮುತ್ತಲ ಗ್ರಾಮಗಳ ಸಮೀಪ ಈ ಬಸ್ ಅನ್ನು ಓಡಾಡಿಸಿದ ಕಳ್ಳರು ಮತ್ತೆ ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಗ್ರಾಮದತ್ತ ಬಂದಿದ್ದಾರೆ. ಡೀಸೆಲ್ ಖಾಲಿಯಾದ ಹಿನ್ನೆಲೆಯಲ್ಲಿ ಬಸ್ ಅನ್ನು ಜನ್ನೇನಹಳ್ಳಿ ಗ್ರಾಮದ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದಿರುವುದೇ ಕಳ್ಳರಿಗೆ ಪ್ಲಸ್ ಪಾಯಿಂಟ್ ಆಗಿದೆ ಎನ್ನಲಾಗುತ್ತಿದೆ.