Mangaluru: ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ನಡೆಸಿ ವಂಚಿಸಿದ ಆರೋಪಿಗೆ 12 ವರ್ಷ ಕಾರಾಗೃಹ ಶಿಕ್ಷೆ: ಸಂತ್ರಸ್ತೆಗೆ 2.50 ಲಕ್ಷ ರೂ. ಪರಿಹಾರ
Thursday, October 14, 2021
ಮಂಗಳೂರು: ಅಪ್ರಾಪ್ತೆಯನ್ನು ಮದುವೆಯಾಗುವೆನೆಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಯುವಕನೋರ್ವ ಮಗುವಾದ ಬಳಿಕ ಪರಾರಿಯಾಗಿದ್ದಾನೆಂಬ ಆರೋಪ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೋಕ್ಸೋ) ನ್ಯಾಯಾಲಯದಲ್ಲಿ ಸಾಬೀತುಗೊಂಡಿದ್ದು ಅಪರಾಧಿಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.
ಮೂಲತಃ ಗದಗ ಜಿಲ್ಲೆಯ ಪ್ರಸ್ತುತ ನಗರದ ಕಾವೂರಿನಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಮಲ್ಲಿಕಾರ್ಜುನ ಹನುಮಂತಪ್ಪ (27) ಶಿಕ್ಷೆಗೊಳಗಾದ ಅಪರಾಧಿ.
ಆರೋಪಿ ಮಲ್ಲಿಕಾರ್ಜುನ ಹನುಮಂತಪ್ಪ ಹಾಗೂ ಸಂತ್ರಸ್ತ ಬಾಲಕಿಯ ತಂದೆ ಸ್ನೇಹಿತರಾಗಿದ್ದು ಒಟ್ಟಿಗೆ ಕೂಲಿ ಕೆಲಸವನ್ನು ಮಾಡುತ್ತಿದ್ದವರು. ಅಲ್ಲದೆ ಅಪರಾಧಿ ಹಾಗೂ ಸಂತ್ರಸ್ತೆಯು ನೆರೆಹೊರೆಯ ಮನೆಯವರಾಗಿದ್ದರು. ಈ ಸಂದರ್ಭ 16 ವರ್ಷದ ಸಂತ್ರಸ್ತ
ಬಾಲಕಿಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದ ಮಲ್ಲಿಕಾರ್ಜುನ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ 2017ರ ಮೇ ತಿಂಗಳಿನಲ್ಲಿ ಅಪಹರಣ ಮಾಡಿದ್ದ. ಬಾಲಕಿ ನಾಪತ್ತೆಯಾದ ಬಗ್ಗೆ ಹೆತ್ತವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಪಹರಣ ಮಾಡಿದ ಆರೋಪಿ ಮಲ್ಲಿಕಾರ್ಜುನ ಸಂತ್ರಸ್ತ ಬಾಲಕಿಯನ್ನು ಗೋವಾಕ್ಕೆ ಕರೆದೊಯ್ದಿದ್ದ. ಅಲ್ಲಿ ಆಕೆಯೊಂದಿಗೆ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಗರ್ಭಿಣಿಯಾಗಿದ್ದ ಬಾಲಕಿ ಗೋವಾದ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಈ ಸಂದರ್ಭ ಆರೋಪಿ ಮಲ್ಲಿಕಾರ್ಜುನ ಬಾಲಕಿ ಹಾಗೂ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲದೆ ಆಕೆಯ ಪೋಷಕರಿಗೂ ಈ ವಿಚಾರವನ್ನು ತಿಳಿಸದಂತೆ ಜೀವ ಬೆದರಿಕೆಯನ್ನೂ ಒಡ್ಡಿದ್ದ. ಆದರೆ ವಿಚಾರ ತಿಳಿಯುತ್ತಿದ್ದಂತೆ ಬಾಲಕಿಯನ್ನು ಪೋಷಕರು ಮನೆಗೆ ಕರೆದುಕೊಂಡು ಬಂದು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಲ್ಲಿಕಾರ್ಜುನನ ವಿರುದ್ಧ ಅಪಹರಣ, ಅತ್ಯಾಚಾರ, ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ(ಪೊಕ್ಸೊ) ಪ್ರಕರಣವನ್ನು ದಾಖಲಿಸಿ ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಎಸಿಪಿಗಳಾದ ರಾಜೇಂದ್ರ, ಮಂಜುನಾಥ ಶೆಟ್ಟಿ ಮತ್ತು ಶ್ರೀನಿವಾಸ ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ವಿಚಾರಣೆ ನಡೆಸಿದ ಎಫ್‌ಟಿಎಸ್‌ಸಿ-1 (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ ಪ್ರಕರಣದಲ್ಲಿ 25 ಸಾಕ್ಷಿಗಳನ್ನು ವಿಚಾರಿಸಿ ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣಕ್ಕೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ತೆಲು ತಪ್ಪಿದರೆ ಮತ್ತೆ ಹೆಚ್ಚುವರಿ 4 ತಿಂಗಳುಗಳ ಕಾಲ ಸಜೆ, ಅಪಹರಣ ಮಾಡಿರುವುದಕ್ಕೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 2 ತಿಂಗಳು ಹೆಚ್ಚುವರಿ ಸಜೆ, ವಿವಾಹವಾಗುವುದಾಗಿ ವಂಚಿಸಿರುವುದಕ್ಕೆ 6 ತಿಂಗಳು ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿ 15 ದಿನಗಳ ಸಜೆ ಹಾಗೂ ಪೊಕ್ಸೊ ಕಾಯ್ದೆಯಡಿ 12 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 50ಸಾವಿರ ರೂ. ಪರಿಹಾರ ನೀಡಬೇಕು. ಅಲ್ಲದೆ, ಸರಕಾರ 2.50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೋ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.