Mangaluru: ಆಳ ಸಮುದ್ರ ಮೀನುಗಾರರ ಬಲೆಗೆ ಬಿತ್ತು ಬರೋಬ್ಬರಿ 1,200 ಕೆಜಿ ತೂಕದ ಬೃಹತ್ ಗಾತ್ರದ ಮೀನು: ಆದರೆ ಅದನ್ನು ಮರಳಿ ಬಿಟ್ಟದ್ದೇಕೆ?
Tuesday, October 26, 2021
ಮಂಗಳೂರು: ಮೀನುಗಾರಿಕೆಗೆಂದು ಆಳ ಸಮುದ್ರಕ್ಕೆ ಹೋಗುವ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮೀನುಗಳು ದೊರೆಯೋದು ಸರ್ವೇ ಸಾಮಾನ್ಯ. ಆದರೆ ಕಳೆದ ಮೂರು ದಿನಗಳ ಹಿಂದೆ ಮಂಗಳೂರಿನ ಮೀನುಗಾರರ ಬಲೆಗೆ ಬರೋಬ್ಬರಿ 1,200 ಕೆಜಿ ತೂಕದ ಮೀನು ಪತ್ತೆಯಾಗಿದೆ. ಆದರೆ ಮೀನುಗಾರರು ತಮ್ಮ ಬಲೆಯನ್ನೇ ತುಂಡರಿಸಿ ಆ ಮೀನನ್ನು ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರಂತೆ. ಯಾಕಾಗಿ ಅವರು ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆನ್ನುವುದಕ್ಕೆ ಕಾರಣ ಇಲ್ಲಿದೆ.
ಮಂಗಳೂರಿನ ಸಾಗರ್ ಎಂಬ ಬೋಟ್ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಕಳೆದ 10 ದಿನಗಳ ಹಿಂದೆ ಸಮುದ್ರಕ್ಕೆ ತೆರಳಿತ್ತು. 3 ದಿನಗಳ ಹಿಂದೆ 50 ನಾಟೆಕಲ್ ಹೊರಗಡೆ ಮೀನುಗಾರಿಕೆ ನಡೆಸಲು ಮೀನುಗಾರರು ಬಲೆ ಬೀಸಿದ್ದಾರೆ. ಬಲೆಯನ್ನು ಎಳೆಯುವಾಗ ಬಲೆ ಭಾರೀ ಭಾರವಿದ್ದಂತೆ ಭಾಸವಾಗಿದೆ. ಬಹಳಷ್ಟು ಮೀನು ಬಿದ್ದಿದೆ ಎಂದು ಭ್ರಮಿಸಿ ಮೀನುಗಾರರು ಬಲೆಯನ್ನು ಮೇಲೆತ್ತಿದ್ದಾರೆ. ಆದರೆ ಬಲೆ ಮೇಲೆ ಬಂದಾಗ ಅದರಲ್ಲಿ ಬೃಹತ್ ಗಾತ್ರದ 'ವೇಲ್' ಮೀನು ಪತ್ತೆಯಾಗಿದೆ.
ಆದರೆ ಈ 'ವೇಲ್' ಮೀನು ಅಳಿವಿನಂಚಿನಲ್ಲಿರುವ ಪ್ರಭೇದವಾಗಿದ್ದು, ಈ ಮೀನು ಹಿಡಿಯುವುದನ್ನು ಕೇಂದ್ರ ಸರಕಾರವು ಸೇರಿದಂತೆ ಜಾಗತಿಕವಾಗಿಯೂ ನಿಷೇಧಿಸಲಾಗಿದೆ. ಹಾಗಾಗಿ ಮೀನುಗಾರರು ಬಲೆಯನ್ನು ತುಂಡರಿಸಿ ಮತ್ತೆ ಮೀನನ್ನು ಜೀವಂತವಾಗಿ ಸಮುದ್ರಕ್ಕೆ ಬಿಟ್ಟಿದ್ದಾರೆ.
ಸುಮಾರು 1,200 ಕೆಜಿ ತೂಕವಿದ್ದ ಈ ಬೃಹತ್ ವೇಲ್ ಮೀನನ್ನು ಸಮುದ್ರದಿಂದ ಮೇಲೆತ್ತುವಾಗ ಮೀನುಗಾರರ ಏರಿಕಂಬವೇ ತುಂಡರಿಸಿದೆ. ಬಲೆ ಸಹಿತ ಮೀನು ಬಿಟ್ಟರೂ ಅದು ಉಳಿಯುವುದಿಲ್ಲ ಎಂಬ ಕಾರಣಕ್ಕೆ ಬಲೆಯನ್ನು ತುಂಡರಿಸಿ ಬಿಡಲಾಗಿದೆ. ಪರಿಣಾಮ ಮೀನುಗಾರರಿಗೆ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ, ಮೀನುಗಾರರು ಮೀನುಗಾರಿಕೆ ನಡೆಸಿ ದಡಕ್ಕೆ ಬಂದ ಬಳಿಕವಷ್ಟೇ ಈ ಸುದ್ದಿ ತಿಳಿದು ಬಂದಿದೆ.