Mangaluru: ಮಧ್ಯರಾತ್ರಿ ಎರಡು ತಂಡಗಳ ಮಧ್ಯೆ ಮಾರಾಮಾರಿ, ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ: ಏಳು ಮಂದಿ ವಶಕ್ಕೆ
Sunday, October 31, 2021
ಮಂಗಳೂರು: ನಗರದ ಬಳ್ಳಾಲ್ ಬಾಗ್ ಪ್ರದೇಶದಲ್ಲಿ ನಿನ್ನೆ ತಡರಾತ್ರಿ 11.45ಕ್ಕೆ ಎರಡು ತಂಡಗಳ ಮಧ್ಯೆ ನಡೆದ ಮಾರಾಮಾರಿ ನಡೆದಿದ್ದು, ಬಿಡಿಸಲು ಹೋದ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಳ್ಳಿ, ವಾಕಿಟಾಕಿ ಕಿತ್ತೆಸೆದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಬಂಧಿತ ಆರೋಪಿಗಳು.
ನಿನ್ನೆ ತಡರಾತ್ರಿ 11.45ರ ಸುಮಾರಿಗೆ ಎರಡು ತಂಡಗಳ ಮಧ್ಯೆ ಬಳ್ಳಾಲ್ ಬಾಗ್ ಬಳಿ ರಸ್ತೆಯಲ್ಲಿಯೇ ಮಾರಕಾಯುಧಗಳನ್ನು ಹಿಡಿದು ಮಾರಾಮಾರಿ ನಡೆದಿತ್ತು. ತಕ್ಷಣ ಸ್ಥಳಕ್ಕೆ ಬರ್ಕೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಧಾವಿಸಿ ಹೊಡೆದಾಟ ನಡೆಸಿರುವ ತಂಡವನ್ನು ಸಮಾಧಾನ ಮಾಡಲೆತ್ನಿಸಿದ್ದಾರೆ. ಈ ಸಂದರ್ಭ ಆರೋಪಿ ಧೀರಜ್ ಎಂಬಾತ ಸಮಾಧಾನ ಮಾಡಲೆತ್ನಿಸಿರುವ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ, ಅವರ ಕೈಯ್ಯಲ್ಲಿದ್ದ ವಾಕಿಟಾಕಿಯನ್ನು ಕಿತ್ತೆಸೆದಿದ್ದಾನೆ. ಜೊತೆಗೆ ಉಳಿದ ಆರೋಪಿಗಳು ಅವರು ಮುಂದೆ ಹೋಗದಂತೆ ತಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಹೆಚ್ಚಿನ ಪೊಲೀಸರು ಬರುತ್ತಿದ್ದಂತೆ ಕೆಲ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳದಲ್ಲಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರಾಮಾರಿ ಯಾಕೆ ನಡೆದಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಈ ಮಾರಾಮಾರಿಯಲ್ಲಿ ಸ್ಥಳದಲ್ಲಿದ್ದ ಒಂದು ಚತುಷ್ಕಕ್ರ ವಾಹನ ಸೇರಿ, ಆರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.