Mangaluru: ಕೋರ್ಟ್ ತೀರ್ಪಿನಿಂದ ನಡೆದ ಪಾರ್ಟಿ ಸಂದರ್ಭ ಎದುರಾದರು ವೈರಿಗಳು; ಮಂಗಳೂರಿನಲ್ಲಿ ನಡೆದ ಘರ್ಷಣೆಗೆ ಇದುವೇ ಕಾರಣ!
Sunday, October 31, 2021
ಮಂಗಳೂರು: 2017ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಖುಲಾಸೆಗೊಂಡಿದ್ದಾರೆಂದು ನಿನ್ನೆ ನ್ಯಾಯಾಲಯ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಖುಲಾಸೆಗೊಂಡ ತಂಡ ರಾತ್ರಿ ಪಾರ್ಟಿ ಆಯೋಜಿಸಿತ್ತು. ಆದರೆ ಈ ಸಂದರ್ಭ ಎದುರಾಳಿ ತಂಡ ಹಾಗೂ ಖುಲಾಸೆಗೊಂಡ ತಂಡ ಎದುರು ಬದುರಾಗಿದ್ದು, ಈ ಸಂದರ್ಭ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ನಗರದ ಬಳ್ಳಾಲ್ ಬಾಗ್ ಪ್ರದೇಶದ ಸಾಯಿ ಸೆನ್ ಅಪಾರ್ಟ್ ಮೆಂಟ್ ಮುಂಭಾಗ ನಿನ್ನೆ ತಡರಾತ್ರಿ 11.45ಕ್ಕೆ ಈ ಮಾರಾಮಾರಿ ನಡೆದಿದೆ. ಎರಡೂ ತಂಡಗಳು ವಿಕೆಟ್, ಪೈಪ್, ಕಲ್ಲು ಹಿಡಿದುಕೊಂಡು ಮಾರಾಮಾರಿ ನಡೆಸಿದೆ. ಪರಿಣಾಮ ಅಪಾರ್ಟ್ ಮೆಂಟ್ ಮುಂಭಾಗ ನಿಲ್ಲಿಸಿರುವ ಒಂದು ಕಾರು ಹಾಗೂ ಆರು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕರ್ತವ್ಯದಲ್ಲಿದ್ದ ಬರ್ಕೆ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿ ಮಾರಾಮಾರಿಯನ್ನು ಬಿಡಿಸಲು ಹೋಗಿ, ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಈ ಸಂದರ್ಭ ಧೀರಜ್ ಶೆಟ್ಟಿ ಎಂಬಾತ ಆ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಳ್ಳಿ, ಅವರ ವಾಕಿಟಾಕಿಯನ್ನು ಕಿತ್ತೆಸೆದ ಘಟನೆ ನಡೆದಿದೆ. ಜೊತೆಗೆ ಉಳಿದ ಆರೋಪಿಗಳು ತಾನು ಮುಂದೆ ಹೋಗದಂತೆ ತಡೆದಿದ್ದಾರೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಹೆಚ್ಚಿನ ಪೊಲೀಸರು ಬರುತ್ತಿದ್ದಂತೆ ಕೆಲ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಸ್ಥಳದಲ್ಲಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಎಂಬ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.