
ಯುವತಿಯ ರೇಪ್ ಮಾಡಿ ತಲೆ ಮರೆಸಿಕೊಂಡಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕನ ಪುತ್ರ ಖಾಕಿ ಬಲೆಗೆ: ಅರೆಸ್ಟ್ ಹಿಂದೆ ತಂದೆಯೆ ಕೈವಾಡವಿದೆಯೇ ಗುಮಾನಿ!
Wednesday, October 27, 2021
ಇಂದೋರ್: ವಿವಾಹವಾಗುವೆನೆಂದು ನಂಬಿಸಿ ಯುವತಿಯೊಬ್ಬಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚನೆಗೈದಿರುವ ಆರೋಪ ಎದುರಿಸುತ್ತಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕನ ಪುತ್ರನ ಕರಣ್ ಮೋರ್ವಾಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾರೆ.
ಆರೋಪಿ ಕರಣ್ ಮೋರ್ವಾಲ್ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಮುರಳಿ ಮೋರ್ವಾಲ್ ಪುತ್ರ. ಮೋಸ ಹೋಗಿರುವ ಯುವತಿ ಪೊಲೀಸ್ ಠಾಣೆಯಲ್ಲಿ ಕರಣ್ ವಿರುದ್ಧ ದೂರು ನೀಡುತ್ತಿದ್ದಂತೆಯೇ ಆತ ಎಸ್ಕೇಪ್ ಆಗಿದ್ದ. ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಆತ ಕೈಗೆ ಸಿಕ್ಕಿದೆ ತಲೆಮರೆಸಿಕೊಂಡಿದ್ದ.
ಮೋಸ ಹೋದ ಯುವತಿ ಇಂದೋರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ, ಪೊಲೀಸ್ ಅಧಿಕಾರಿ ಜ್ಯೋತಿ ಶರ್ಮ ಅವರು ಕರಣ್ ಮೋರ್ವಾಲ್ ಬಂಧನಕ್ಕೆ ಭಾರಿ ಜಾಲ ಹೆಣೆದಿದ್ದರು. ಕೊನೆಗೂ ಆತ ಶಾಜಪುರ್ ಜಿಲ್ಲೆಯ ಮಕ್ಸಿ ಪಟ್ಟಣದಲ್ಲಿ ಇರುವುದನ್ನು ಪತ್ತೆ ಹಚ್ಚಿ ಹೆಡೆಮುರಿಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಈ ಬಂಧನ ಹಿಂದೆ ಹಲವು ಅನುಮಾನ ಆರಂಭವಾಗಿದೆ. ಕೆಲ ದಿನಗಳ ಹಿಂದೆ ಸ್ವತಃ ಶಾಸಕ ಮುರಳಿ ಮೋರ್ವಾಲ್ ಅವರೇ ಮಹಿಳಾ ಪೊಲೀಸ್ ಠಾಣೆಯ ಸಮೀಪವಿರುವ ಪಾಲಾಸಿಯ ಪೊಲೀಸ್ ಠಾಣೆಗೆ ಬಂದು ಅಲ್ಲಿನ ಪೊಲೀಸರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದಲೇ ಗುಸುಗುಸು ಕೇಳಲಾರಂಭಿಸಿದೆ. ಈ ಮಾತುಕತೆ ನಡೆದ ಬೆನ್ನಲ್ಲೇ ಪೊಲೀಸರು ಕರಣ್ ಮೋರ್ವಾಲ್ ನನ್ನು ಬಂಧಿಸಿರುದನ್ನು ಕಂಡಾಗ ಅನುಮಾನ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದೆ ಯಾವ ರೀತಿ ಕಾನೂನುಕ್ರಮ ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.