
ಆರ್ಯನ್ ಖಾನ್ ನೊಂದಿಗೆ ಕ್ರೂಸ್ ನಲ್ಲಿ ಸಿಕ್ಕಿಬಿದ್ದಾಕೆ ಯಾರು, ಎಲ್ಲಿಯವಳು, ಏನಿವಳ ಹಿನ್ನೆಲೆ?: ಇಲ್ಲಿದೆ ಮಾಹಿತಿ
Tuesday, October 5, 2021
ಮುಂಬೈ: 'ಬಾಲಿವುಡ್ ಬಾದ್ ಷಾ' ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಇನ್ನಿತರರು ಕ್ರೂಸ್ ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸಿರುವ ಆರೋಪದ ಹಿನ್ನೆಲೆಯಲ್ಲಿ ಎನ್ ಸಿಬಿ ಪೊಲೀಸರಿಂದ ಬಂಧಿತರಾಗಿದ್ದಾರೆ. ಈ ಪೈಕಿ ಆರ್ಯನ್ ಖಾನ್ ಜತೆ ಬಂಧನಕ್ಕೊಳಗಾಗಿರುವ ಮಹಿಳೆ ಯಾರೆಂಬುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ.
ಕ್ರೂಸ್ ನಲ್ಲಿ ಆರ್ಯನ್ ಖಾನ್ ಜತೆಯಲ್ಲಿ ಎನ್ ಸಿಬಿ ಬಲೆಗೆ ಬಿದ್ದರಿರುವ ಮುನ್ ಮುನ್ ಧಮೇಚಾ ಎಂಬಾಕೆಯತ್ತ ಹಲವರ ದೃಷ್ಟಿ ನೆಟ್ಟಿದ್ದು, ಆಕೆ ಯಾರು, ಎಲ್ಲಿಯವಳು ಎಂಬುದರ ಬಗ್ಗೆ ಕುತೂಹಲ ಹೊಂದಿದ್ದಾರೆ. ಇದೀಗ ಮುನ್ ಮುನ್ ಧಮೇಚಾ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ.
ದೆಹಲಿ ವಾಸಿಯಾಗಿರುವ ಮುನ್ ಮುನ್ ಧಮೇಚಾ ಮೂಲತಃ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ತಹಸಿಲ್ಪ್ರದೇಶದವಳು. ಆಕೆಯ ತಂದೆ ಈ ಹಿಂದೆಯೇ ಮೃತಪಟ್ಟಿದ್ದು, ತಾಯಿಯೂ ಕಳೆದ ವರ್ಷ ಸಾವಿಗೀಡಾಗಿದ್ದರು. ಆ ಬಳಿಕ ಒಂಟಿಯಾದ ಆಕೆ ದೆಹಲಿಯಲ್ಲಿ ಉದ್ಯೋಗದಲ್ಲಿದ್ದ ಸಹೋದರನ ಮನೆ ಸೇರಿದ್ದಳು. ಆದ್ದರಿಂದ ಮಧ್ಯಪ್ರದೇಶದಲ್ಲಿದ್ದ ಅವರ ಮನೆಯೂ ಖಾಲಿ ಬಿದ್ದಿತ್ತು.
ಸಹೋದರ ಪ್ರಿನ್ಸ್ ಜತೆಯಲ್ಲಿ ದೆಹಲಿಯಲ್ಲಿ ನೆಲೆಸಿರುವ ಮುನ್ ಮುನ್ ಧಮೇಚಾ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾಳೆ. ತನ್ನ ಕ್ಯಾಟ್ ವಾಕ್ ಹಲವಾರು ವೀಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಹಂಚಿಕೊಂಡಿದ್ದಾಳೆ. ಒಂದಷ್ಟು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿರುವ ಆಕೆ ಬಾಲಿವುಡ್ನ ಹಲವು ಗಣ್ಯರೊಂದಿಗೆ ಸಂಪರ್ಕವನ್ನೂ ಹೊಂದಿದ್ದಾಳೆ. ಮಾತ್ರವಲ್ಲದೆ ಅವರೊಂದಿಗೆ ಪಾರ್ಟಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾಳೆ. ಇದೀಗ ಆರ್ಯನ್ ಖಾನ್ ನೊಂದಿಗೆ ಕ್ರೂಸ್ ನಲ್ಲಿ ಡ್ರಗ್ಸ್ ಪಾರ್ಟಿ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವ ಮುನ್ ಮುನ್ ಧಮೇಚಾ ಕಂಬಿ ಎಣಿಸುವಂತಾಗಿದೆ.