
ಪ್ರೀತಿಸಲೊಲ್ಲೆ ಎಂದಾಕೆಯನ್ನು ಬರ್ಬರವಾಗಿ ಹತ್ಯೆಮಾಡಿದ ಭಗ್ನಪ್ರೇಮಿ: ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ
Wednesday, October 27, 2021
ಹೊಸಕೋಟೆ: ಪ್ರೀತಿಸಲೊಲ್ಲೆ ಎಂದಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಗ್ನಪ್ರೇಮಿಯೋರ್ವನು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಲಿಂಗದೀರ ಮಲ್ಲಸಂದ್ರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಅಂಕೋಲ ಮೂಲದ ಉಷಾಗೌಡ (25) ಕೊಲೆಯಾದ ಯುವತಿ. ತಮಿಳುನಾಡು ಮೂಲದ ಗೋಪಾಲಕೃಷ್ಣ (30) ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ.
ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಉಷಾ ಗೌಡ, ಬೇರೊಬ್ಬ ಯುವಕನನ್ನು ಪ್ರೇಮಿಸುತ್ತಿದ್ದಳು. ಆದರೂ ಗೋಪಾಲಕೃಷ್ಣ ತನ್ನನ್ನೇ ಪ್ರೀತಿಸುವಂತೆ ಉಷಾ ಗೌಡನ ಹಿಂದೆ ದುಂಬಾಲು ಬಿದ್ದು ಪೀಡಿಸುತ್ತಿದ್ದ. ಆದರೆ ಇದಕ್ಕೆ ಒಲ್ಲದ ಉಷಾ, ''ತಾನು ಬೇರೊಬ್ಬರನನ್ನು ಇಷ್ಟಪಟ್ಟಿರುವೆ. ತಮ್ಮನ್ನು ಮದುವೆ ಆಗಲು ಸಾಧ್ಯವೇ ಇಲ್ಲ. ನನ್ನ ಸಹವಾಸಕ್ಕೆ ಬರಬೇಡಿ, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ'' ಎಂದಿದ್ದಳಂತೆ.
ಆದರೆ ಉಷಾ ಗೌಡ ಮೇಲೆ ಒಲವಿದ್ದ ಗೋಪಾಲಕೃಷ್ಣನಿಗೆ ಆಕೆಯು ಬೇರೊಬ್ಬನನ್ನು ಪ್ರೀತಿಸಲು ಇಷ್ಟವಿರಲಿಲ್ಲ. ಆದ್ದರಿಂದ ಬುಧವಾರ ಬೆಳಗ್ಗೆ ಲಿಂಗದೀರ ಮಲ್ಲಸಂದ್ರ ಗ್ರಾಮದಲ್ಲಿ ಉಷಾಳನ್ನು ಉಸಿರುಗಟ್ಟಿಸಿ ಗೋಪಾಲಕೃಷ್ಣ ಹತ್ಯೆಮಾಡಿದ್ದಾನೆ. ಬಳಿಕ ತಾನು ಗೆದ್ದಲಾಪುರ ಗ್ರಾಮದ ಬಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.