
ಮಂಗಳೂರು: ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸದಂತೆ ತಿಳಿಹೇಳಲು ಆಯೋಜಿಸಿದ್ದ ಪಾರ್ಟಿಯಲ್ಲಿ ಸ್ನೇಹಿತನ ಹತ್ಯೆ: ಐವರು ಆರೋಪಿಗಳ ಬಂಧನ
Monday, October 18, 2021
ಮಂಗಳೂರು: ಅಕ್ಕ-ತಂಗಿ-ತಾಯಿಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಟ್ಟ ಚಾಳಿಯನ್ನು ನಿಲ್ಲಿಸಲೆಂದು ಆಯೋಜಿಸಿರುವ ಪಾರ್ಟಿಯಲ್ಲಿಯೇ ಸ್ನೇಹಿತನನ್ನೇ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಸುರತ್ಕಲ್ ನಿವಾಸಿ ಜೋಯ್ಸನ್(21), ನಂದಿಗುಡ್ಡ ನಿವಾಸಿ ಪ್ರಮೀತ್(24), ವಾಮಂಜೂರು ನಿವಾಸಿ ಕಾರ್ತಿಕ್(21), ಪಚ್ಚನಾಡಿ ನಿವಾಸಿಗಳಾದ ಪ್ರಜ್ವಲ್(22), ದುರ್ಗೇಶ್(22) ಬಂಧಿತರು.
ಕೊಲೆಯಾದ ಧನುಷ್ ಗೆ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡುವ ಚಾಳಿಯಿದ್ದು, ಆತ ಅಕ್ಕ-ತಂಗಿ-ತಾಯಿಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಟ್ಟ ಚಾಳಿಯನ್ನು ಹೊಂದಿದ್ದ. ಈ ಬಗ್ಗೆ ಆತನಿಗೆ ತಿಳಿಹೇಳಬೇಕೆಂದು ಸ್ನೇಹಿತರು ಅ.15 ರಂದು ಮಂಗಳೂರಿನ ಪಂಪ್ ವೆಲ್ ಬಳಿಯ ಸಾಯಿ ಪ್ಯಾಲೇಸ್ ಲಾಡ್ಜ್ ನಲ್ಲಿ ರೂಂ ಮಾಡಿ ಪಾರ್ಟಿ ಆಯೋಜಿಸಿದ್ದರು.
ಪಾರ್ಟಿಯ ವೇಳೆ ಈ ವಿಚಾರವನ್ನು ಸ್ನೇಹಿತರು ಧನುಷ್ ಗೆ ತಿಳಿಸಿದ್ದಾರೆ. ಆದರೆ ಆತ ಈ ಬಗ್ಗೆ ಉಡಾಫೆಯಿಂದ ಮಾತನಾಡಿದ್ದಾನೆ. ಈ ಸಂದರ್ಭ ಸ್ನೇಹಿತರ ಮಧ್ಯೆ ವಾಗ್ವಾದ ನಡೆದು ಹೊಡೆದಾಟ ನಡೆದಿದೆ. ಆಗ ಜಾಯ್ಸನ್ ತನ್ನ ಬಳಿಯಿದ್ದ ಬಟನ್ ಚಾಕುವಿನಿಂದ ಧನುಷ್ ಎದೆಗೆ ಹಾಗೂ ಬೆನ್ನುಗೆ ಇರಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವನ ಬಂಧನ ಇನ್ನಷ್ಟೇ ಆಗಬೇಕಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.