
ಆತನನ್ನು ಪ್ರೀತಿಸಬೇಡ ಎಂದರೂ ಹಠ ಹಿಡಿದ ಮಗಳ ಕತ್ತು ಬಿಗಿದು ಹತ್ಯೆ ಮಾಡಿದ ತಂದೆ: ಮೃತ್ಯು ಪಾಶವಾಯಿತು ಆಕೆ ಧರಿಸಿದ ವೇಲ್!
Friday, October 29, 2021
ಚಿಕ್ಕಮಗಳೂರು: ಯುವಕನೋರ್ವನನ್ನು ಪ್ರೀತಿಸುತ್ತಿದ್ದ ಮಗಳಿಗೆ ತಂದೆಯ ಮೃತ್ಯುವಾಗಿದ್ದು, ಪ್ರಿಯಕರನನ್ನು ಬಿಟ್ಟು ಬಿಡು ಎಂದು ಹೇಳಿದರೂ ಕೇಳದ ಮಗಳ ಕೊನೆಗೆ ಪ್ರಾಣವನ್ನೇ ಕಸಿದುಬಿಟ್ಟಿದ್ದಾನೆ ಈ ತಂದೆ. ಇಂತಹದ್ದೊಂದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಸಂಭವಿಸಿದೆ.
ಕಡೂರು ತಾಲೂಕಿನ ಬೀರೂರು ನಿವಾಸಿ ರಾಧಾ (18) ಕೊಲೆಗೀಡಾದ ಮಗಳು. ಚಂದ್ರಪ್ಪನೆಂಬ ಆರೋಪಿಯೇ ಮಗಳನ್ನೇ ಹತ್ಯೆ ಮಾಡಿದ ತಂದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೆಂಚೇಗೌಡನ ಕೊಪ್ಪಲಿನ ನಿವಾಸಿಯಾಗಿರುವ ಚಂದ್ರಪ್ಪನ ಮಗಳು ರಾಧಾ ಅದೇ ಗ್ರಾಮದ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ರಾಧಾ ಆ ಯುವಕನನ್ನು ಪ್ರೀತಿ ಮಾಡುವುದು ಚಂದ್ರಪ್ಪನಿಗೆ ಇಷ್ಟವಿರದ ಕಾರಣ ಆತನಿಂದ ದೂರ ಇರುವಂತೆ ಮಗಳಿಗೆ ಎಚ್ಚರಿಸಿದ್ದ.
ಆದರೆ ಅದಕ್ಕೆ ಒಪ್ಪದೆ ಆ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಇದೇ ಕಾರಣಕ್ಕೆ ರಾಧಾಳನ್ನು ಚೆನ್ನಗಿರಿಯಲ್ಲಿರುವ ಆಕೆಯ ಅಕ್ಕನ ಮನೆಯಲ್ಲಿ ಬಿಟ್ಟಿದ್ದನು. ಬುಧವಾರ ಹಬ್ಬವಿದ್ದ ಕಾರಣ ಮಗಳನ್ನು ಕರೆದುಕೊಂಡು ಹೋಗಲು ಬಂದಿದ್ದ. ಮನೆಗೆ ಬೈಕ್ ನಲ್ಲಿ ಹೋಗುತ್ತಿರುವಾಗ ಬುದ್ಧಿವಾದ ಹೇಳಿದ್ದಾನೆ.
ಆದರೆ ಆಕೆ ತನ್ನ ಮಾತನ್ನು ಒಪ್ಪದೆ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದದ್ದರಿಂದ ಚಂದ್ರಪ್ಪ ಕೋಪಗೊಂಡಿದ್ದ. ಪರಿಣಾಮ ಬೀರೂರು ಮಾರ್ಗವಾಗಿ ಬಂದ ಪಟ್ಟಣದ ಹೊರವಲಯದಲ್ಲಿರುವ ರೈಲ್ವೇಗೇಟ್ ಬಳಿ ಜನಸಂಚಾರವಿದ ಸ್ಥಳದಲ್ಲಿ ರಾಧಾ ಧರಿಸಿರುವ ಚೂಡಿದಾರದ ವೇಲ್ ನಿಂದಲೇ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ.
ಮಗಳಿಗೆ ಕೊಲೆ ಮಾಡಿ ಗ್ರಾಮಕ್ಕೆ ತೆರಳಿ ಮನೆಯಲ್ಲಿ ಈ ವಿಚಾರ ತಿಳಿಸಿ ತಾನೂ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾನೆ. ಆದರೆ ಕುಟುಂಬಸ್ಥರು ಚಂದ್ರಪ್ಪನನ್ನು ರಕ್ಷಿಸಿದ್ದಾರೆ. ತಕ್ಷಣ ಕುಟುಂಬಸ್ಥರು ಚಂದ್ರಪ್ಪನನ್ನು ಕರೆದೊಯ್ದು ಬೀರೂರು ಠಾಣೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಈ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾನೇ ಕೊಲೆ ಮಾಡಿರುವುದಾಗಿ ಚಂದ್ರಪ್ಪ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.