ಮತ್ತೊಂದು ಮರ್ಯಾದಾ ಹತ್ಯೆ: ಯುವತಿಯ ಎದುರೇ ಪ್ರಿಯಕರನ ಹತ್ಯೆಗೈದಿರುವ ಶಂಕೆ?
Sunday, October 24, 2021
ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿದೆ ಎನ್ನುವ ಆರೋಪವೊಂದು ಕೇಳಿಬಂದಿದೆ.
ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ಯುವಕನೋರ್ವ ನಾಪತ್ತೆಯಾಗಿದ್ದ, ಇದೀಗ ಆತ ಪ್ರೀತಿಸುತ್ತಿದ್ದ ಯುವತಿಯ ಮನೆಯ ಕಡೆಯವರಿಂದಲೇ ಹತ್ಯೆಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಯುವತಿಯ ಎದುರೇ ಆಕೆಯ ಪ್ರಿಯಕರನನ್ನು ಸಂಬಂಧಿಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬಳಗಾನೂರ ಗ್ರಾಮದ ರವಿ ನಿಂಬರಗಿ (32) ಅನ್ಯಕೋಮಿನ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಇದನ್ನು ಸಹಿಸದ ಯುವತಿಯ ಪೋಷಕರು ರವಿಯನ್ನು ಹತ್ಯೆಗೈದು ಮೃತದೇಹವನ್ನು ಯಾರಿಗೂ ತಿಳಿಯದಂತೆ ಹೊತ್ತೊಯ್ದು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇವರಿಬ್ಬರ ಪ್ರೀತಿಯ ವಿಚಾರವಾಗಿ ಎರಡೂ ಕುಟುಂಬಗಳ ಮಧ್ಯೆ ಸಾಕಷ್ಟು ಜಗಳಗಳು ನಡೆದು ವೈಮನಸ್ಸು ಉಂಟಾಗಿತ್ತು.
ಇದೀಗ ರವಿಯನ್ನು ಯುವತಿಯ ಕಡೆಯ 8 ಜನರು ಕರೆದುಕೊಂಡು ಬಂದು ಆಕೆಯ ಎದುರೇ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ರವಿ ನಿಂಬರಗಿಯ ಪೋಷಕರು ನಿನ್ನೆಯಿಂದ ತಮ್ಮ ಮಗ ಕಾಣಿಯಾಗಿದ್ದಾನೆ ಎಂದು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಲಮೇಲ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಬಳಗಾನೂರು ಗ್ರಾಮಕ್ಕೆ ಭೇಟಿ ನೀಡಿ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಯುವತಿಯ ಸಂಬಂಧಿಕರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.