ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ವಿಚಿತ್ರ ಟ್ವಿಸ್ಟ್: ಮನೆಮಗಳೇ ಆಹಾರಕ್ಕೆ ವಿಷವಿಕ್ಕಿದಳೇ
Monday, October 18, 2021
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಿತ್ರ ಟ್ವಿಸ್ಟ್ ದೊರಕಿದ್ದು, ಮನೆಮಗಳೇ ವಿಷವಿಕ್ಕಿರುವುದು ತನಿಖೆಯಿಂದ ಬಯಲಾಗಿದೆ. ಕಾರಣ ಕೇಳಿದ್ರೆ ಮಾತ್ರ ದಂಗಾಗ್ತೀರಾ.
ಜುಲೈ 13ರಂದು ಚಿತ್ರದುರ್ಗದ ಗೊಲ್ಲರಹಟ್ಟಿಯ ಒಂದೇ ಕುಟುಂಬದ ತಿಪ್ಪಾ ನಾಯ್ಕ (45), ಸುಧಾಬಾಯಿ (40), ರಮ್ಯಾ (16) ಹಾಗೂ ಗುಂಡಿಬಾಯಿ (80) ಮೃತಪಟ್ಟಿದ್ದರು. ಈ ನಾಲ್ವರೂ ವಿಷಾಹಾರ ಸೇವನೆಯಿಂದ ಮೃತಪಟ್ಟಿರುವುದು ವಿಧಿವಿಜ್ಞಾನ ತಪಾಸಣೆಯಿಂದ ತಿಳಿದುಬಂದಿತ್ತು. ಆದ್ದರಿಂದ ಇದೊಂದು ಆತ್ಮಹತ್ಯೆಯಾಗಿರಬಹುದೆಂದು ಶಂಕಿಸಲಾಗಿತ್ತು. ಆದರೆ ಆ ಬಳಿಕ ಯಾರೋ ವಿಷ ಹಾಕಿರಬಹುದೆಂಬ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.
ಆದರೆ ಇದೀಗ ಈ ನಿಗೂಢ ಸಾವಿನ ಹಿಂದಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ಮನೆ ಮಗಳೇ ಸ್ವಂತ ತಾಯಿ-ತಂದೆ, ಅಜ್ಜಿ ಮತ್ತು ಸಹೋದರಿಗೆ ತಿನ್ನುವ ಆಹಾರದಲ್ಲಿ ವಿಷವಿಕ್ಕಿ ಕೊಲೆ ಮಾಡಿರುವ ಭಯಾನಕ ಸತ್ಯ ಹೊರಕ್ಕೆ ಬಂದಿದೆ. ಬಡ ಕುಟುಂಬವಾದ ಈ ಮನೆಯವರು 17 ವರ್ಷದ ಹಿರಿಯ ಮಗಳನ್ನು ಕೂಲಿ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೆ ಆಕೆ ಕೆಲಸಕ್ಕೆ ಹೋಗದ ಕಾರಣ ಬಯ್ಯುತ್ತಿದ್ದರು. ಇದೇ ಕಾರಣಕ್ಕೆ ಅವರು ತಿನ್ನುವ ಆಹಾರಕ್ಕೆ ವಿಷ ಬೆರೆಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಿಷಾಹಾರ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಆಕೆಯ ಸಹೋದರ ರಾಹುಲ್ ಚೇತರಿಸಿಕೊಂಡಿದ್ದಾನೆ.
ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿರುವ ತಾಯಿ ಅಡುಗೆ ಮಾಡಿ ಊಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅದೇ ಹೊತ್ತಿಗೆ ಕರೆಂಟ್ ಹೋಗಿದ್ದು ಈ ಸಮಯದಲ್ಲಿಯೇ ಮುದ್ದೆಯಿದ್ದ ಪಾತ್ರೆಗೆ ಯಾರೋ ವಿಷ ಬೆರೆಸಿರುವುದಾಗಿ ಶಂಕೆಯಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ರಾಹುಲ್ ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ತನಿಖೆ ನಡೆಸಿದ್ದ ಪೊಲೀಸರು ಅಡುಗೆ ಮಾಡಲು ಬಳಸಿದ್ದ ಪಾತ್ರೆಯನ್ನು ಆಹಾರ ಪದಾರ್ಥಗಳನ್ನು ವಿಧಿ ವಿಜ್ಞಾನ ಸಂಸ್ಥೆಗೆ ರವಾನಿಸಿದ್ದರು. ಅಲ್ಲದೆ ಎಲ್ಲರೂ ಅಂದು ಮುದ್ದೆ ಊಟ ಮಾಡಿದ್ದರೂ, 17 ವರ್ಷದ ಹಿರಿಯ ಮಗಳು ಮಾತ್ರ ಊಟ ಮಾಡಿರಲಿಲ್ಲ. ತನಗೆ ಊಟ ಬೇಡ ಎಂದಿದ್ದಳು. ಈ ಮಾಹಿತಿ ಪೊಲೀಸರಿಗೆ ದೊರಕಿದ ತಕ್ಷಣ ಆಕೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ತಾನೇ ವಿಷವುಕ್ಕಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಪದೇ ಪದೇ ಕೂಲಿಗೆ ಹೋಗು ಎಂದು ಬೈಯುತ್ತಿದ್ದುದರಿಂದ ಈ ಕೃತ್ಯ ಮಾಡಿರುವುದಾಗಿ ಆಕೆ ಹೇಳಿದ್ದಾರೆ. ಈ ಕುರಿತು ಚಿತ್ರದುರ್ಗ ಎಸ್ಪಿ ರಾಧಿಕಾ ಮಾಹಿತಿ ನೀಡಿದ್ದಾರೆ.