
ಕಲಬುರಗಿಯಲ್ಲಿ ಮತ್ತೊಂದು ಕೊಲೆ: ತಂಗಿಯನ್ನು ಪ್ರೀತಿಸುತ್ತಿದ್ದ ಸ್ನೇಹಿತನನ್ನೇ ಹತ್ಯೆ ಮಾಡಿದ ಯುವಕ.
Friday, October 29, 2021
ಕಲಬುರಗಿ: ಮೊನ್ನೆಯಷ್ಟೇ ಪುಡಿ ರೌಡಿಗಳ ತಂಡವೊಂದು ಮನೆಯೊಂದಕ್ಕೆ ನುಗ್ಗಿ ಯುವಕನ ಹತ್ಯೆ ಮಾಡಿರುವ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ನಗರದಲ್ಲಿ ಮತ್ತೋರ್ವ ಯುವಕನ ಹತ್ಯೆ ನಡೆದಿದೆ.
ಕಲಬುರಗಿ ಹೊರವಲಯದ ಕಾಳನೂರ್ ಢಾಬಾ ಬಳಿ ಬುಧವಾರ ರಾತ್ರಿ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿದೆ. ನಗರದ ಫಿಲ್ಟರ್ ಬೆಡ್ ನಿವಾಸಿ ಆಕಾಶ್ (21) ಕೊಲೆಯಾದ ಯುವಕ.
ಆಕಾಶ್ ಓಂನಗರದ ಗ್ಯಾರೆಜ್ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಶ್ರೀನಿಧಿ ಎಂಬಾತನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಹತ್ಯೆಯಾದ ಆಕಾಶ್ ತನ್ನ ಸ್ನೇಹಿತ ಶ್ರೀನಿಧಿಯ ಸಹೋದರಿಯನ್ನು ಪ್ರೀತಿಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಅದೇ ಯುವತಿಯೊಂದಿಗೆ ಆಕಾಶ್ ಓಡಿ ಹೋಗಿದ್ದನಂತೆ. ಈ ವಿಚಾರಕ್ಕೆ ಸ್ನೇಹಿತ ಆಕಾಶ್ನನ್ನು ಮುಗಿಸಬೇಕೆಂದು ಶ್ರೀನಿಧಿ ಪ್ಲ್ಯಾನ್ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಅದರಂತೆ ಮೊನ್ನೆ ರಾತ್ರಿ ಆಕಾಶ್ನನ್ನು ಶ್ರೀನಿಧಿಯೇ ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ತನಿಖೆ ನಡೆಸುತ್ತಿಸಿದ್ದಾರೆ.
ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಭೀತರಾಗಿದ್ದಾರೆ. ನಿನ್ನೆ ಬೆಳಗ್ಗೆ ಡಬರಾಬಾದ್ ಬಡಾವಣೆಯಲ್ಲಿ ತಂಡವೊಂದು ಮನೆಯೊಂದಕ್ಕೆ ನುಗ್ಗಿ ಮಹೇಶ್ ಎಂಬ ಯುವಕನನ್ನು ಹತ್ಯೆ ಮಾಡಿತ್ತು. ಇದೀಗ ರಾತ್ರಿ ಮತ್ತೋರ್ವ ಯುವಕನ ಕೊಲೆಯಾಗಿದೆ.