ಮದುಮಕ್ಕಳಿಗೆ ಪೆಟ್ರೋಲ್ ಗಿಫ್ಟ್ ನೀಡಿದ ಯುವಕರ ತಂಡ: ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Saturday, October 16, 2021
ಮಂಗಳೂರು: ಮದುಮಕ್ಕಳಿಗೆ ತಮಾಷೆಗಾಗಿ ವಿಚಿತ್ರ ಉಡುಗೊರೆಗಳನ್ನು ನೀಡುವುದು ನಾವು ನೋಡುತ್ತಲೇ ಇರುತ್ತೇವೆ. ಇಲ್ಲೊಬ್ಬ ಯುವಕರ ತಂಡವೊಂದು ತೈಲ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ನವ ದಂಪತಿಗಳಿಗೆ ಮೂರು ಲೀ. ಪೆಟ್ರೋಲ್ ಉಡುಗೂರೆಯಾಗಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಪಂ ಸದಸ್ಯ ಸಚಿನ್ ಮರ್ಕಲ್ ಹಾಗೂ ವೈಷ್ಣವಿ ಎಂಬುವರ ವಿವಾಹ ನೆರವೇರಿತ್ತು. ಮದುಮಕ್ಕಳಿಗೆ ಶುಭಾಶಯ ಕೋರುವ ಸಂದರ್ಭ ವೇದಿಕೆಯಲ್ಲಿದ್ದ ದಂಪತಿಗೆ ಸಚಿನ್ ಮರ್ಕಲ್ ಅವರ ಸ್ನೇಹಿತರು ಮೂರು ಲೀ. ಪೆಟ್ರೋಲ್ ಅನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
ಪೆಟ್ರೋಲ್ ಉಡುಗೊರೆ ನೋಡಿ ನವದಂಪತಿ ಸಹಿತ ಮದುವೆಛತ್ರದಲ್ಲಿ ಹಾಜರಿದ್ದವರು ಗೊಳ್ಳೆಂದು ನಕ್ಕಿದ್ದಾರೆ. ಸದ್ಯ ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಶೇರ್ ಕೂಡಾ ಆಗುತ್ತಿದೆ.