
ಮಳೆ ಅವಾಂತರದಿಂದ ಅಡುಗೆ ಮಾಡಲು ತಂದ ಪಾತ್ರೆಯಲ್ಲೇ ಕುಳಿತು ಮದುವೆ ಮಂಟಪ ಸೇರಿದ ಜೋಡಿ: ಫೋಟೋ ವೈರಲ್
Tuesday, October 19, 2021
ಕೇರಳ: ಕೇರಳ ರಾಜ್ಯದಲ್ಲಿ ಇತ್ತೀಚೆಗೆ ಭಾರೀ ಮಳೆ ಸುರಿದಿದ್ದು, ಸಾಕಷ್ಟು ಕಡೆಗಳಲ್ಲಿ ಮಳೆ ನೀರು ನುಗ್ಗಿ, ಪ್ರವಾಹ ಸೃಷ್ಟಿಯಾಗಿ ಅವಾಂತರ ಸೃಷ್ಟಿಯಾಗಿತ್ತು.
ಈ ಮಳೆಯ ನಡುವೆಯೇ ವಧೂ-ವರ ಜೋಡಿಯೊಂದು ದೊಡ್ಡ ಕೊಳದಪ್ಪಲೆ(ಪಾತ್ರೆ) ಯೊಳಗೆ ಕುಳಿತು ಮದುವೆ ಮಂಟಪ ಆಗಮಿಸಿದೆ. ಇದರ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಹಾಸ್ಯಮಿಶ್ರಿತ ಪ್ರತಿಕ್ರಿಯೆಗಳು ಬರುತ್ತಿವೆ. ಮದುವೆ ಮಂಟಪದ ಮುಂಭಾಗ ನಿಂತ ನೀರಿನಿಂದ ಧರಿಸಿರುವ ಬಟ್ಟೆಯು ನೆನೆಯದಿರಲೆಂದು ಇವರು ಮಾಡಿರುವ ಐಡಿಯಾಗೆ ಎಲ್ಲರೂ ಭೇಷ್ ಎಂದಿದ್ದಾರೆ.
ಆರೋಗ್ಯ ಕಾರ್ಯಕರ್ತರಾದ ಆಕಾಶ್ ಮತ್ತು ಐಶ್ವರ್ಯಾ ಜೋಡಿಗೆ ಮೊನ್ನೆ ಮದುವೆಯಾಗಿತ್ತು. ಇವರು ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಮಳೆರಾಯ ಅಡ್ಡಿವ್ಯಕ್ತಪಡಿಸಿದ್ದ. ಸ್ಥಳೀಯರೊಬ್ಬರ ಐಡಿಯಾದಿಂದ ಮದುಮಕ್ಕಳು ಮದುವೆಯ ಅಡುಗೆಗೆಂದು ತರಿಸಿದ್ದ ದೊಡ್ಡ ಪಾತ್ರೆಯಲ್ಲಿ ಕುಳಿತು ಮಂಟಪವನ್ನು ತಲುಪಿ ಮದುವೆಯಾಗಿದ್ದಾರೆ.