ಅಪ್ರಾಪ್ತೆಯನ್ನು ವಿವಾಹವಾದ ಯುವಕ: ಮಗುವಾದ ಬಳಿಕ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು, ಬಂಧನ
Saturday, October 16, 2021
ಕೊರಟಗೆರೆ: ಅಪ್ರಾಪ್ತೆಯನ್ನು ಪ್ರೀತಿಸಿ ವಿವಾಹವಾದ ಯುವಕನೋರ್ವನನ್ನು ಹೆಣ್ಣು ಮಗುವಿನ ಜನನಕ್ಕೆ ಕಾರಣಕರ್ತನಾದ ಬಳಿಕ ಸಿಡಿಪಿಒ ದೂರಿನನ್ವಯ ಪೊಕ್ಸೊ ಕಾಯ್ದೆಯಡಿ ಬಂಧಿಸಿರುವ ಘಟನೆ ಕೊರಟಗೆರೆ ತಾಲೂಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ರಮೇಶ್ ಎಂಬಾತನೇ ಪೊಕ್ಸೊ ಕಾಯ್ದೆಯಡಿ ಬಂಧಿತರಾಗಿರುವ ಆರೋಪಿ.
ಈತ ವಿವಾಹವಾದ ಅಪ್ರಾಪ್ತ ಬಾಲಕಿಯ ಹೆರಿಗೆಯ ಬಳಿಕ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಪ್ರಾಪ್ತೆಯನ್ನು ಮದುವೆಯಾಗಿದ್ದಾನೆಂದು ದೂರು ನೀಡಿದ್ದರು ಎನ್ನಲಾಗಿದೆ. ಆಟೊ ರಿಕ್ಷಾ ಚಾಲಕನಾಗಿದ್ದ ರಮೆಶ್ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಅಪ್ರಾಪ್ತೆಗೆ ಕೊರಟಗೆರೆ ತಾಲ್ಲೂಕಿನ ಮಾರುತಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಈ ವಿಚಾರ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ರವಾನೆಯಾಗಿದೆ. ಅಲ್ಲಿನ ಸಿಡಿಪಿಒ ದೂರಿನನ್ವಯ ಕೋಳಾಲ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆಯೇ ಮದುವೆಯ ಬಗ್ಗೆ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿದೇರ್ಶಕಿ ಅಂಬಿಕಾ, ಅಂಗನವಾಡಿ ಕಾರ್ಯಕರ್ತೆ ಹಾಗೂ ಗ್ರಾಪಂ ಪಿಡಿಒ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಮನೆಯವರು ಗುಟ್ಟಾಗಿ ಬೇರೆಡೆ ಮದುವೆ ಮುಗಿಸಿ ಅಪ್ರಾಪ್ತೆಯ ಕಾಲುಂಗುರ ಹಾಗೂ ತಾಳಿಯನ್ನು ತೆಗೆದಿಟ್ಟು ಪರಿಶೀಲನೆಗೆ ಬಂದವರನ್ನು ಯಾಮಾರಿಸಿದ್ದರು ಎನ್ನಲಾಗಿದೆ.
ಇದೀಗ ಅಪ್ರಾಪ್ತೆಯ ಹೆರಿಗೆಯಾದ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾರೆ. ಸಿಡಿಪಿಒ ದೂರಿನನ್ವಯ ಆರೋಪಿ ಪತಿ ಹಾಗೂ ಮದುವೆಗೆ ಸಹಕರಿಸಿ ರಂಗ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ್, ಪಿಎಸ್‌ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ.