ಇದೆಂಥಹ ಶಿಕ್ಷೆ! ಕರುಣೆಯೇ ಇಲ್ಲದೆ ವಿದ್ಯಾರ್ಥಿಯನ್ನು ಮೊದಲನೆಯ ಮಹಡಿಯಿಂದ ತಲೆಕೆಳಗಾಗಿಸಿ ನೇತಾಡಿಸುವುದೇ
Saturday, October 30, 2021
ಲಖನೌ: ವಿದ್ಯಾರ್ಥಿಯೋರ್ವನು ಶಾಲೆಯಲ್ಲಿ ಚೇಷ್ಟೆ ಮಾಡಿದನೆಂದು ಕೋಪಗೊಂಡ ಶಾಲೆಯ ಸಂಚಾಲಕ ಮೊದಲನೇ ಮಹಡಿಯ ಮೇಲಿನಿಂದ ಆ ಬಾಲಕನ ಕಾಲು ಹಿಡಿದು ತಲೆಕೆಳಗಾಗಿ ನೇತಾಡಿಸಿ ಶಿಕ್ಷೆ ನೀಡಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಈ ಕೃತ್ಯದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸಂಬಂಧಿತ ಶಾಲೆಯ ಸಂಚಾಲಕನನ್ನು ಬಂಧಿಸಿದ್ದಾರೆ.
ಇಂತಹ ಅಮಾನುಷ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಹ್ರೌರ ಪ್ರದೇಶದ ಸದ್ಭಾವನಾ ಶಿಕ್ಷಣ ಸಂಸ್ಥಾನ್ ಶಾಲೆಯಲ್ಲಿ ನಡೆದಿದೆ.
ಅ.27 ರಂದು ಈ ಶಾಲೆಯ ನರ್ಸರಿ ವಿದ್ಯಾರ್ಥಿ ಸೋನು(5) ಊಟದ ಸಮಯದಲ್ಲಿ ಇತರ ವಿದ್ಯಾರ್ಥಿಗಳಿಗೆ ಚೇಷ್ಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಶಾಲೆಯ ಸಂಚಾಲಕ ಮನೋಜ್ ವಿಶ್ವಕರ್ಮ, ಆತನನ್ನು ಮೊದಲನೇ ಮಹಡಿಯಿಂದ ಕಾಲು ಹಿಡಿದು ತಲೆಕೆಳಗಾಗಿಸಿ ನೇತಾಡಿಸಿದ್ದಾರೆ. ಬಾಲಕನನ್ನು ಈ ರೀತಿಯಲ್ಲಿ ಬೆದರಿಸುತ್ತಿರುವ ಸಂದರ್ಭದಲ್ಲಿ ಶಾಲೆಯ ಇತರ ಮಕ್ಕಳು ನಿಂತು ನೋಡುತ್ತಿರುವ ಚಿತ್ರವು ವೈರಲ್ ಆಗಿದೆ.
ಈ ಬಗ್ಗೆ ಬಾಲಕ ಸೋನುವಿನ ತಂದೆ ರಣಜಿತ್ ಯಾದವ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದರಿ ಶಾಲಾ ಸಂಚಾಲಕನನ್ನು ಅಹ್ರೌರಾ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಜುವಿನೈಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.