ಪುಂಜಾಲಕಟ್ಟೆಯಲ್ಲಿ ಅಪಘಾತ- ಸಹೋದ್ಯೋಗಿಗಳ ಕಣ್ಣೆದುರಲ್ಲೆ ಕೊನೆಯುಸಿರೆಳೆದ ಪೊಲೀಸ್ ಕಾನ್ಸ್ ಟೇಬಲ್
Friday, October 15, 2021
ಮಂಗಳೂರು: ಪುಂಜಾಲಕಟ್ಟೆಯಲ್ಲಿ ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸಹೋದ್ಯೋಗಿಗಳ ಕಣ್ಣೆದುರಲ್ಲೆ ಕೊನೆಯುಸಿರೆಳೆದಿದ್ದಾರೆ.
ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದ ಅಪಘಾತದಲ್ಲಿ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಮೂಲತಃ ವೇಣೂರಿನ ಮರೋಡಿ ನಿವಾಸಿ ಅಬೂಬಕ್ಕರ್ (48) ಗಂಭೀರ ಗಾಯಗೊಂಡಿದ್ದರು. ವಾಮದಪದವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದ ವೇಳೆ ನೇರಳಕಟ್ಟೆ ಬಳಿ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದು ಇವರು ಗಂಭೀರ ಗಾಯಗೊಂಡಿದ್ದರು.ಘಟನೆಯಲ್ಲಿ ಮತ್ತೊಂದು ಬೈಕಿನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಕೂಡ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಖ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಕ್ರಮ ಮುಗಿಸಿ ಇತರ ಪೊಲೀಸ್ ಸಿಬ್ಬಂದಿಗಳು ಜೀಪಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಪೊಲೀಸ್ ಕಾನ್ಸ್ ಟೇಬಲ್ ಅಬೂಬಕ್ಕರ್ ಅವರು ತನ್ನ ಬೈಕಿನಲ್ಲಿ ಬರುತ್ತುದ್ದರು.
ನೇರಳಕಟ್ಟೆ ಸಮೀಪ ಎರಡು ಬೈಕ್ ನಡುವೆ ಡಿಕ್ಕಿ ಸಂಭವಿಸಿದಾಗ ಹಿಂಬದಿಯಿಂದ ಜೀಪಿನಲ್ಲಿ ಬರುತ್ತಿದ್ದ ಇತರ ಪೋಲೀಸ್ ಸಿಬ್ಬಂದಿಗಳು ಗಾಯಳುಗಳನ್ನು ಜೀಪಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ,
ಗಂಭೀರ ಸ್ಥಿತಿಯಲ್ಲಿದ್ದ ಆಬೂಬಕ್ಕರ್ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತಾದರೂ, ಈ ವೇಳೆ ಆಸ್ಪತ್ರೆಯಲ್ಲಿ ಯಾರೂ ವೈದ್ಯ ರು ಇರಲಿಲ್ಲ. ಬಳಿಕ ಅದೇ ಜೀಪಿನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ಸಿಬ್ಬಂದಿಗಳ ಕಣ್ಣೆದುರಲ್ಲೆ ಕೊನೆಯುಸಿರೆಳೆದಿದ್ದಾರೆ.