ಸುಳ್ಯ: ಪುಟಾಣಿಗಳಿಬ್ಬರು ರಸ್ತೆ ದುರಸ್ತಿ ಮಾಡುವ ಫೋಟೋ ವೈರಲ್: ತಕ್ಷಣ ರಸ್ತೆ ಸರಿಪಡಿಸುವಂತೆ ಗ್ರಾಪಂಗೆ ಬನ್ಯಾಯಾಧೀಶರಿಂದ ತಾಕೀತು
Tuesday, October 26, 2021
ಸುಳ್ಯ: ಸಾಮಾನ್ಯವಾಗಿ ಮನಪಾ, ಗ್ರಾಪಂಗಳು ರಸ್ತೆ ದುರಸ್ತಿ ಕಾರ್ಯವನ್ನು ಮಾಡದಿದ್ದಲ್ಲಿ ಸ್ಥಳೀಯರು, ಸಂಘ-ಸಂಸ್ಥೆಗಳು, ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿ ಮಾಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದು, ಕೇಳಿದ್ದುಂಟು. ಆದರೆ ಇಲ್ಲೊಂದು ಕಡೆಯಲ್ಲಿ ಶಾಲೆಗೆ ಹೋಗುವ ದಾರಿ ಕೆಸರುಮಯವಾಗಿದೆಯೆಂದು ಪುಟಾಣಿಗಳಿಬ್ಬರೇ ರಸ್ತೆ ದುರಸ್ತಿ ಮಾಡಿರುವ ಮೂಲಕ ಸುದ್ದಿಯಾಗಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ನಡೆದದ್ದು, ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ-ಬೆಳ್ಳಾರೆ ರಸ್ತೆಯ ಮಂಡೇಪು ಎಂಬಲ್ಲಿ. ಇಲ್ಲಿನ ಮಣ್ಣಿನ ರಸ್ತೆಯು ಸಂಪೂರ್ಣವಾಗಿ ಕೆಸರುಮಯವಾಗಿತ್ತು. ಸ್ಥಳೀಯ ನಿವಾಸಿ ಸಂತೋಷ್ ಮತ್ತು ಕೇಶವ ಎಂಬವರ ಮಕ್ಕಳಾದ 2ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ಎಂಬಿಬ್ಬರು ಪುಟಾಣಿಗಳು ಹಾರೆ ಹಿಡಿದು ರಸ್ತೆಯಲ್ಲಿ ತುಂಬಿರುವ ಕೆಸರನ್ನು ಬದಿಗೆ ಸರಿಸಿ, ಗುಂಡಿಯಲ್ಲಿ ತುಂಬಿಕೊಂಡಿರುವ ನೀರನ್ನು ಹೊರಗೆ ಬಿಡುವ ಪ್ರಯತ್ನ ಮಾಡಿದ್ದರು.
ಪ್ರಾಥಮಿಕ ಶಾಲಾ ತರಗತಿಗಳು ನಿನ್ನೆಯಿಂದ ಆರಂಭವಾಗಿದ್ದು, ಈ ಮಧ್ಯೆ ಪುಟಾಣಿಗಳಿಬ್ಬರು ನಿತ್ಯ ತಾವು ಸಂಚರಿಸಬೇಕಾದ ರಸ್ತೆಯನ್ನು ದುರಸ್ತಿ ಪಡಿಸುತ್ತಿರುವ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಪಡೆದ ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್, ಸ್ಥಳಕ್ಕೆ ಭೇಟಿ ನೀಡಿದ್ದರು. ಮಕ್ಕಳ ಕೈಯಲ್ಲಿ ಹಾರೆ ಹಿಡಿಸಿದ ಪೋಷಕರನ್ನು ಪ್ರಶ್ನಿಸಿದ್ದಾರೆ. ಹಲವಾರು ಬಾರಿ ಪಂಚಾಯತ್‌ಗೆ ಮನವಿ ನೀಡಿದರೂ ರಸ್ತೆ ಸರಿಯಾಗದ ಹಿನ್ನೆಲೆಯಲ್ಲಿ ನಾವೇ ಶ್ರಮದಾನ ಮಾಡಿದ್ದು, ಈ ಸಮಯದಲ್ಲಿ ಮಕ್ಕಳು ಹಾರೆ ಹಿಡಿದಿದ್ದಾರೆ ಎಂದು ಪೋಷಕರು ನ್ಯಾಯಾಧೀಶರ ಬಳಿ ಹೇಳಿದ್ದಾರೆ.
ಇದರಿಂದ ಗ್ರಾಪಂ ಅನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ತಕ್ಷಣ ರಸ್ತೆಯನ್ನು ಸರಿಪಡಿಸುವಂತೆ ಪಂಚಾಯತ್‌ಗೆ ತಾಕೀತು ಮಾಡಿದ್ದಾರೆ.