
ಪೊಲೀಸ್ ಎಂದು ಬೆದರಿಸಿ ಮಹಿಳೆಯ ಅತ್ಯಾಚಾರ, ದರೋಡೆ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು
Thursday, October 7, 2021
ಕುಣಿಗಲ್: ಮಹಿಳೆಯೋರ್ವರಿಗೆ ಪೊಲೀಸ್ ಎಂದು ಭಯಹುಟ್ಟಿಸಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ, ಚಾಕು ತೋರಿಸಿ ನಗದು ಸೇರಿದಂತೆ, ಮಾಂಗಲ್ಯ ಸರ, ಮೊಬೈಲ್ ಪೋನ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯ ಹೆಡೆಮುರಿ ಕಟ್ಟಿ ಅಮೃತೂರು ಪೊಲೀಸರು ಬಂಧಿಸಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡನಗನಹಳ್ಳಿ ಗ್ರಾಮದ ನಿವಾಸಿ ಕಾರು ಚಾಲಕ ಪ್ರದೀಪ್ ಅಲಿಯಾಸ್ ಕೆಂಚಪ್ರದಿ (37) ಬಂಧಿತ ಆರೋಪಿ.
ಅ.1 ರಂದು ಸಂಜೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದ ಮಹಿಳೆಯೋರ್ವರು ಕುಣಿಗಲ್ ಪಟ್ಟಣಕ್ಕೆ ಬಂದಿದ್ದು, ಮರಳಿ ಆಕೆ ಮನೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗಗುತ್ತಿದ್ದರು. ಈ ಸಂದರ್ಭ ಆರೋಪಿ ಪದೀಪ್ ಆಕೆಯನ್ನು ಕುಣಿಗಲ್ ಪಟ್ಟಣದ ಬಿದನಗೆರೆ ಬಳಿ ಅಡ್ಡಗಟ್ಟಿದ್ದಾನೆ. 'ನಾನು ಪೊಲೀಸ್, ಯಾವುದೋ ಕೇಸ್ ಸಂಬಂಧ ನಿಮ್ಮನ್ನು ಠಾಣೆಗೆ ಕರೆದುಕೊಂಡು ಬನ್ನಿ ಎಂದು ಸಬ್ ಇನ್ಸ್ ಸ್ಪೆಕ್ಟರ್ ತಿಳಿಸಿದ್ದಾರೆ' ಎಂದು ಮಹಿಳೆಗೆ ಬೆದರಿಕೆ ಹುಟ್ಟಿಸಿದ್ದಾನೆ. ಅಲ್ಲದೆ ಬಲವಂತದಿಂದ ಆಕೆಯ ಬೈಕಿನಲ್ಲಿಯೇ ಕುಳಿತು ಯಡಿಯೂರು ಬಳಿ ಇರುವ ಶ್ರೀನಿವಾಸ ದೇವರ ಬೆಟ್ಟವಿದ್ದ ನಿರ್ಜನ ಪ್ರದೇಶಕ್ಕೆ ಕೆರೆದುಕೊಂಡು ಹೋಗಿದ್ದಾನೆ.
ಅಲ್ಲಿ ಹೋಗಿ ಸಬ್ ಇನ್ ಸ್ಪೆಕ್ಟರ್ ಇಲ್ಲಿಗೇ ಬರುತ್ತಾರೆ ಎಂದು ಹೇಳಿದ್ದಾನೆ. ಬಳಿಕ ಆಕೆಯನ್ನು ಬೆದರಿಸಿ, ಯಾರೂ ಇಲ್ಲರದಿರುವುದನ್ನು ಖಚಿತಪಡಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ಚಾಕು ತೋರಿಸಿ ಆಕೆಯ ಕೊರಳಿನಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ, ಮೊಬೈಲ್ ಫೋನ್, ಎಟಿಎಂ ಕಾರ್ಡ್ ಮತ್ತು ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ಕುರಿತಾಗಿ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ಮತ್ತು ತಂಡ ದೇವಲಾಪುರ ಹೋಬಳಿಯ ದೊಡ್ಡನಗನಹಳ್ಳಿ ಗ್ರಾಮದ ತನ್ನ ಮನೆಯಲ್ಲಿಯೇ ಅಡಗಿ ಕೂತಿದ್ದ ಆರೋಪಿ ಪ್ರದೀಪನನ್ನು ಬಂಧಿಸಿದೆ. ಬಂಧಿತನಿಂದ ಮಾಂಗಲ್ಯ ಸರ, ಪರ್ಸ್, ಬೈಕ್, ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪ್ರದೀಪ್ ಮೇಲೆ ಈಗಾಗಲೇ 17 ಪ್ರಕರಣಗಳು ದಾಖಲಾಗಿದೆ. ಈತ ಒಂಟಿ ಮಹಿಳೆಯರನ್ನು ಗುರುತಿಸಿ ಅವರಿಗೆ ತಾನು ಪೊಲೀಸ್ ಎಂದು ಸುಳ್ಳು ಹೇಳಿ, ಬೆದರಿಸಿ ಅವರ ಬಳಿಯಿದ್ದ ಬೆಲೆ ಬಾಳುವ ಚಿನ್ನದ ಒಡವೆ ಹಾಗೂ ಇತರೆ ವಸ್ತುಗಳನ್ನು ಸುಲಿಗೆ ಮಾಡಿ ಹಲವಾರು ಭಾರಿ ಜೈಲಿಗೆ ಹೋಗಿ ಬಂದಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.