
"ಬೇರೆ ಸಂಬಂಧ, ಮಕ್ಕಳು ಹೊಂದುವ ಬಯಕೆಯಿಲ್ಲ, ಗರ್ಭಪಾತ" ಆರೋಪದ ಬಗ್ಗೆ ಮೌನ ಮುರಿದ ನಟಿ ಸಮಂತಾ
Saturday, October 9, 2021
ಹೈದರಾಬಾದ್: ಸ್ಟಾರ್ ದಂಪತಿ ನಾಗಚೈತನ್ಯ - ಸಮಂತಾ ದಾಂಪತ್ಯ ಜೀವನಕ್ಕೆ ಬಹಿರಂಗವಾಗಿ ವಿದಾಯ ಘೋಷಣೆ ಮಾಡಿದ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಮಾತನಾಡುವುದು ಇನ್ನೂ ನಿಂತಿಲ್ಲ. ವಿಚ್ಛೇದನ ಘೋಷಣೆ ಮಾಡುತ್ತಿದ್ದಂತೆ ನಟಿ ಸಮಂತಾ ವಿರುದ್ಧ ಅನೇಕ ರೀತಿಯ ಮಾತುಗಳು ಕೇಳಿ ಬರಲು ಆರಂಭವಾಗಿದ್ದು, ಇದಕ್ಕೆ ಖುದ್ದಾಗಿ ಅವರೇ ಉತ್ತರ ನೀಡಿದ್ದಾರೆ.
ನಟಿ ಸಮಂತಾರಿಗೆ ಮಕ್ಕಳು ಹೊಂದುವುದು ಇಷ್ಟವಿರಲಿಲ್ಲ. ಆಕೆ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದರು. ಅಲ್ಲದೆ ಆಕೆ ಗರ್ಭಪಾತವನ್ನು ಮಾಡಿಸಿಕೊಂಡಿದ್ದರು ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಮೌನ ಮುರಿದಿರುವ ಸಮಂತಾ, ನನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ನೀವು ಸ್ಪಂದನೆ ನೀಡಿರುವುದು ಸಂತೋಷ ತಂದಿದೆ. ಈ ಬಗ್ಗೆ ನನ್ನ ಪರವಾಗಿ ನಿಂತಿರುವುದಕ್ಕೆ ನಿಮಗೆ ಧನ್ಯವಾದ. ನಿಮ್ಮ ಈ ರೀತಿಯ ಸಹಾನುಭೂತಿ, ಕಾಳಜಿಗೆ ನಾನು ಆಭಾರಿಯಾಗಿದ್ದೇನೆ. ಆದರೆ ನೀವು ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. "ನನಗೆ ಬೇರೆ ಸಂಬಂಧವಿದೆ, ಮಕ್ಕಳನ್ನು ಪಡೆದುಕೊಳ್ಳಲು ಇಷ್ಟವಿರಲಿಲ್ಲ. ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂಬ ಸುಳ್ಳು ಸುದ್ದಿಗಳೆಲ್ಲಾ ಹರಿದಾಡುತ್ತಿದೆ. ವಿಚ್ಛೇದನ ಎಂಬುದು ನೋವಿನ ಸಂಗತಿಯಾಗಿದೆ" ಎಂದಿದ್ದಾರೆ.
ಇದಕ್ಕೂ ಮೊದಲು ಮತ್ತೊಂದು ಫೋಸ್ಟ್ ಹಾಕಿಕೊಂಡಿರುವ ಸಮಂತಾ ಅವರು, ಈ ರೀತಿ ಹೇಳಿಕೊಂಡಿದ್ದಾರೆ. "ಮಹಿಳೆಯರು ಏನೇ ಕೆಲಸ ಮಾಡಿದರೂ, ಅದನ್ನು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಆದರೆ, ಪುರುಷರು ಮಾಡಿರುವ ಕೆಲಸ ಹಾಗೂ ತಪ್ಪುಗಳಿಗೆ ಪ್ರಶ್ನೆ ಯಾಕೆ ಮಾಡುತ್ತಿಲ್ಲ. ಪುರುಷರು ಏನೂ ಮಾಡಿದರೂ ಅದಕ್ಕೆ ನೈತಿಕ ಪ್ರಶ್ನೆ ಮಾಡುವುದಿಲ್ಲ ಎಂದಾದರೆ ನಮ್ಮ ಸಮಾಜದಲ್ಲಿ ನೈತಿಕತೆ ಇಲ್ಲ ಎಂದರ್ಥ" ಎನ್ನುವ ಸಾಲು ಶೇರ್ ಮಾಡಿಕೊಂಡಿದ್ದರು.