
ಓಲಾ ಕ್ಯಾಬ್ ಜೊತೆಗೆ ಕಿರಿಕ್ ಮಾಡಿಕೊಂಡ ನಟಿ ಸಂಜನಾ ಗಲ್ರಾನಿ!
Wednesday, October 6, 2021
ಬೆಂಗಳೂರು: ನಟನೆಗಿಂತ ಇನ್ನಿತರ ವಿಚಾರಗಳ ಮೂಲಕವೇ ಅತೀ ಹೆಚ್ಚು ಸುದ್ದಿಯಲ್ಲಿರುವ ಸ್ಯಾಂಡಲ್ ವುಡ್ ಬೆಡಗಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣ ಜಾಲದಲ್ಲಿ ಸಿಲುಕಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ಅವರು ಕ್ಯಾಬ್ ಡ್ರೈವರ್ ಓರ್ವನೊಂದಿಗೆ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ.
ಈ ಬಗ್ಗೆ ಓಲಾ ಕ್ಯಾಬ್ ಚಾಲಕ ಸುಸೈ ಮಣಿ ಎಂಬಾತ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸಂಜನಾ ಗಲ್ರಾನಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದು, ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಟಿ ಸಂಜನಾ ಗಲ್ರಾನಿ ಮಂಗಳವಾರ ಬೆಳಗ್ಗೆ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಹೋಗಲೆಂದು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಅವರು ಇಂದಿರಾನಗರದಿಂದ ಕೆಂಗೇರಿ ಕಡೆಗೆ ಹೋಗಲು ಕ್ಯಾಬ್ ಬುಕ್ ಮಾಡಬೇಕಿತ್ತು. ಆದರೆ ಅದರ ಬದಲಿಗೆ ರಾಜರಾಜೇಶ್ವರಿನಗರಕ್ಕೆಂದು ಬುಕ್ ಮಾಡಿದ್ದರು. ಈ ಬಗ್ಗೆ ಓಲಾ ಚಾಲಕನಲ್ಲಿ ಸಂಜನಾ ತಿಳಿಸಿದ ಬಳಿಕ ಓಲಾ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಲೋಕೇಶನ್ ಬದಲಾಯಿಸುವಂತೆ ಹೇಳಿದ್ದ. ಆದರೆ, ಲೋಕೇಶನ್ ಬದಲಾಗಲೇ ಇಲ್ಲ.
ಈ ವಿಚಾರವಾಗಿ ಓಲಾ ಕ್ಯಾಬ್ ಚಾಲಕ ಹಾಗೂ ಸಂಜನಾ ನಡುವೆ ವಾಗ್ವಾದ ಶುರುವಾಗಿದೆ. ಇದರಿಂದ ಕೋಪಗೊಂಡ ಸಂಜನಾ ಕ್ಯಾಬ್ ಡ್ರೈವರ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಕೆ ಎ.ಸಿ. ಆನ್ ಮಾಡುವಂತೆ ಕೇಳಿದಾಗ, ಆನ್ ಮಾಡಿದ ಬಳಿಕವೂ ಅನಗತ್ಯವಾಗಿ ತೊಂದರೆ ಕೊಟ್ಟು ನಿಂದಿಸಿದ್ದಾರೆಂದು ಚಾಲಕ ವೀಡಿಯೋ ಸಹಿತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ನಟಿ ಸಂಜನಾ ಟ್ವೀಟ್ ಮಾಡಿ ಓಲಾ ಕ್ಯಾಬ್ ನ ನಂಬರ್ ಮತ್ತು ಡ್ರೈವರ್ ಹೆಸರು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ಯಾಬ್ ಡ್ರೈವರ್ ಗೆ ಎ.ಸಿ. ಹೆಚ್ಚು ಮಾಡುವಂತೆ ಹೇಳಿದ್ದಕ್ಕೆ ಉಡಾಫೆ ಉತ್ತರ ನೀಡಿದ್ದಾರೆ. ಕ್ಯಾಬ್‌ನ ವಿಂಡೋ ಸಹ ಸರಿ ಇರಲಿಲ್ಲ. ಪೂರ್ಣ ಪ್ರಯಾಣದ ನಗದು ಪಾವತಿಸಿದರೂ ಇಂತಹ ಕಾರನ್ನು ಯಾಕೆ ಒದಗಿಸುತ್ತೀರೆಂದು ಓಲಾ ಸಂಸ್ಥೆಯನ್ನು ಸಂಜನಾ ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ನಟಿ ಸಂಜನಾ ಹಾಗೂ ಓಲಾ ಕ್ಯಾಬ್ ಡ್ರೈವರ್ ಇಬ್ಬರನ್ನೂ ಠಾಣೆಗೆ ಕರೆಸಿರುವ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದ್ದರಿಂದ ಪ್ರಕರಣ ಸದ್ಯ ರಾಜಿಯಲ್ಲಿ ಇತ್ಯರ್ಥಗೊಂಡಿದೆ.