ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ದೈಹಿಕ ಶಿಕ್ಷಣ ನಿರ್ದೇಶಕ ಬಂಧನ
Tuesday, October 26, 2021
ಪುತ್ತೂರು: ಅಪ್ರಾಪ್ತೆ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಡಿಯಲ್ಲಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರನ್ನು ಪೊಕ್ಸೊ ಕಾಯ್ದೆಯಡಿ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಣ ನಿರ್ದೇಶಕ, ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೊ ಬಂಧಿತ ಆರೋಪಿ.
ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಯು ಈ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿದ್ದಳು. ಆರೋಪಿ ಅ.23ರಂದು ಲೈಂಗಿಕ ಕಿರುಕುಳ ನೀಡಿದ್ದಿರುವುದಾಗಿ ಆಕೆ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಪೋಷಕರು ಶಾಲೆಗೆ ಬಂದು ವಿಚಾರಿಸಿ ಬಳಿಕ ಅ.25ರಂದು ಸಂಜೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ನೀಡಿರುವ ದೂರಿನನ್ವಯ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೊ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಮಹಿಳಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಪುತ್ತೂರು ಕ್ಲಬ್ ಬಳಿ ಬಂಧಿಸಲಾಗಿದೆ. ಸೊಂಟ ನೋವು ಎಂದು ಹೇಳಿದ್ದ ವಿದ್ಯಾರ್ಥಿನಿಗೆ ಎಲ್ಯಾಸ್ ಪಿಂಟೊ ವ್ಯಾಯಾಮ ಮಾಡಿಸಿದರೆಂದೂ ಈ ವೇಳೆ ಆಕೆಯ ಸೊಂಟ ಮುಟ್ಟಿದರೆಂದೂ ಆರೋಪ ಕೇಳಿ ಬಂದಿದೆ. ನಾಳೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.