
ಬೀದಿನಾಯಿಗಳ ಬಗ್ಗೆ ಟ್ವೀಟ್ ಮಾಡಿದರೆ, ಅದು ಅವರಿಗೆ ಅನ್ವಯಿಸುತ್ತದೆಂದು ಜನತೆ ತಿಳಿದುಕೊಂಡಲ್ಲಿ ನನ್ನ ತಪ್ಪಲ್ಲ: ನಟ ಸಿದ್ಧಾರ್ಥ್ ಸ್ಪಷ್ಟನೆ
Sunday, October 10, 2021
ಹೈದರಾಬಾದ್: ತಾರಾ ದಂಪತಿ ಸಮಂತಾ - ನಾಗಚೈತನ್ಯ ಅಧಿಕೃತವಾಗಿ ವಿಚ್ಛೇದನ ಘೋಷಿಸಿರುವ ಬೆನ್ನಲ್ಲೇ ನಟ ಸಿದ್ಧಾರ್ಥ್ ಮಾಡಿರುವ ಟ್ವೀಟೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅವರು ಟ್ವೀಟ್ ನಲ್ಲಿ "ನಾನು ಶಿಕ್ಷಕರಿಂದ ಕಲಿತ ಮೊದಲ ಪಾಠವೆಂದರೆ ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ" ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದರು. ಆ ಸಮಯದಲ್ಲಿ ಆ ಟ್ವಿಟರ್ ಟ್ರೆಂಡ್ ಕೂಡಾ ಆಗಿತ್ತು.
ಸಮಂತಾ ವಿಚ್ಛೇದನ ಘೋಷಿಸಿರುವ ಬೆನ್ನಲ್ಲೇ ಸಿದ್ಧಾರ್ಥ್ ಈ ಟ್ವೀಟ್ ಮಾಡಿದ್ದರಿಂದ ಅವರನ್ನೇ ಗುರಿಯಾಗಿರಿಸಿ ಟ್ವೀಟ್ ಮಾಡಿದ್ದಾರೆಂಬ ಚರ್ಚೆ ನೆಟ್ಟಿಗರಿಂದ ಆಗಿತ್ತು. ನಟ ಸಿದ್ಧಾರ್ಥ ಮಾಜಿ ಲವರ್ ಸಮಂತಾ ಅವರ ಮಾಜಿ ಪ್ರಿಯಕರರಾಗಿದ್ದ ಕಾರಣದಿಂದ ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ಭಾರೀ ಸದ್ದು ಮಾಡಿತ್ತು. ತಮ್ಮ ಮುಂದಿನ ಮಹಾಸಮುದ್ರಂ ಸಿನಿಮಾ ಪ್ರಮೋಷನ್ ಸಂದರ್ಭ ಮಾಧ್ಯಮದವರು ಆ ಟ್ವೀಟ್ ಬಗ್ಗೆ ಕೇಳಿರುವುದಕ್ಕೆ ಸಿದ್ಧಾರ್ಥ್ ಈ ರೀತಿ ಸ್ಪಷ್ಟನೆ ನೀಡಿದ್ದಾರೆ. "ನಾನು ಯಾರನ್ನೂ ಬೊಟ್ಟುಮಾಡಿ ಆ ಟ್ವೀಟ್ ಮಾಡಿಲ್ಲ. ನನ್ನ ಮನಸ್ಸಿಗೆ ಏನು ತೋಚುತ್ತದೋ ಅದನ್ನು ನಾನು ಪ್ರತಿದಿನ ಟ್ವೀಟ್ ಮಾಡುತ್ತಿರುತ್ತೇನೆ. ಒಂದು ವೇಳೆ ನಾನು ಬೀದಿನಾಯಿಗಳ ಬಗ್ಗೆ ಟ್ವೀಟ್ ಮಾಡಿದರೆ, ಅದು ಅವರಿಗೆ ಅನ್ವಯಿಸುತ್ತದೆ ಎಂದು ಜನತೆ ಭಾವಿಸಿದರೆ, ಅದಕ್ಕೆಲ್ಲ ನಾನು ಜವಾಬ್ದಾರನಾಗಿರುವುದಿಲ್ಲ. ನನ್ನ ಜೀವನದಲ್ಲಿ ನಾನು ಬೇಡದ ಜನರಿಗಿಂತ ನನ್ನ ಜೀವನದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಹೀಗಾಗಿ ಮಾಧ್ಯಮಗಳ ವದಂತಿಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ" ಎಂದಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದಲ್ಲಿ ಸಿದ್ಧಾರ್ಥ್ ಓರ್ವ ಉತ್ತಮ ಹಾಗೂ ಅದ್ಭುತ ನಟ. ತಮ್ಮ ಮುಂದಿನ ಸಿನಿಮಾ 'ಮಹಾ ಸಮುದ್ರಂ' ಮೂಲಕ ಮತ್ತೆ ಸಿದ್ಧಾರ್ಥ್ ತೆಲುಗು ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಸಿದ್ಧಾರ್ಥ್ ವೈಯುಕ್ತಿಕ ಜೀವನವು ಸಾಕಷ್ಟು ಸುದ್ದಿ ಮಾಡಿತ್ತು. ಏಕೆಂದರೆ, ಅನೇಕ ನಟಿಯರ ಜತೆಯಲ್ಲಿ ನಟ ಸಿದ್ಧಾರ್ಥ್ ಹೆಸರು ತಳುಕು ಹಾಕಿಕೊಂಡಿತ್ತು.
ಸಿದ್ಧಾರ್ಥ್ 2003ರಲ್ಲಿ ಮೇಘನಾ ಎಂಬಾಕೆಯನ್ನು ವಿವಾಹವಾಗಿದ್ದರು. ಆದರೆ, ಅವರಿಬ್ಬರು ಒಂದು ವರ್ಷಗಳ ಕಾಲ ಪ್ರತ್ಯೇಕವಾಗಿ ಜೀವಿಸುವ ಮೂಲಕ 2007ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ನಟಿ ಸೋಹಾ ಅಲಿ ಖಾನ್ ಜತೆ ಲವ್ ಅಫೇರ್ ಇತ್ತು ಎನ್ನಲಾಗಿದೆ. ಆಕೆಯೊಂದಿಗೆ ಬ್ರೇಕ್ ಅಪ್ ಆದ ಬಳಿಕ ನಟಿ ಶ್ರುತಿ ಹಾಸನ್ ಜತೆ ಸಿದ್ಧಾರ್ಥ್ ಹೆಸರು ತಳುಕು ಹಾಕಿಕೊಂಡಿತ್ತು. ನಂತರ ತಮ್ಮ ಪ್ರೇಮ ಸಂಬಂಧವನ್ನು ಕಡಿದುಕೊಂಡಿದ್ದರು.
ಆ ಬಳಿಕ ಸಮಂತಾ ಅವರ ಜತೆ ಸಿದ್ಧಾರ್ಥ್ ಗೆ ಪ್ರೀತಿಯಿತ್ತು ಎನ್ನಲಾಗಿದೆ. ಜಬರ್ದಸ್ತ್ ತೆಲುಗು ಸಿನಿಮಾ ಸೆಟ್ನಲ್ಲಿ ಇಬ್ಬರೂ ಭೇಟಿಯಾಗಿದ್ದು, ಬಳಿಕ ಈ ಸಂಬಂಧ ಗಾಢವಾಗಿ ಪ್ರೀತಿ ಬೆಳೆದಿತ್ತಂತೆ. ಅಲ್ಲದೆ, ಸಮಂತಾ ಸಿದ್ಧಾರ್ಥ್ ನಡುವೆ ಮದುವೆಯ ಯೋಚನೆಯೂ ಇತ್ತು. ಆದರೆ, ನಂತರದ ದಿನಗಳಲ್ಲಿ ಇಬ್ಬರು ದೂರಾಗಿದ್ದರು.