ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ನಟ ಹಾಗೂ ಪಿಎ ಮೊಬೈಲ್, ಕಾಲ್ ಹಿಸ್ಟ್ರಿ ಪರಿಶೀಲನೆ
Friday, October 1, 2021
ಬೆಂಗಳೂರು: ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳಗೋಡು ಪೊಲೀಸರಿಂದ ತನಿಖೆ ಚುರುಕುಗೊಳಿಸಿದ್ದು, ನಟಿಯ ಆಪ್ತ ಸಹಾಯಕ ಮಹೇಶ್ ಮತ್ತು ನಟ ವಿವೇಕ್ ಎಂಬವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಸವಿ ಮಾದಪ್ಪ ತಂದೆ ಪ್ರಭು ಮಾದಪ್ಪ ಇವರಿಬ್ಬರ ಮೇಲೆ ನೀಡಿರುವ ದೂರಿನ ಅನ್ವಯ ಈಗಾಗಲೇ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಕಿರುತೆರೆ ನಟ ವಿವೇಕ್ ಮೊದಲ ಆರೋಪಿಯಾಗಿದ್ದು, ಸವಿ ಮಾದಪ್ಪ ಪಿಎ ಮಹೇಶ್ ಎರಡನೇ ಆರೋಪಿಯಾಗಿದ್ದಾನೆ.
ಸದ್ಯ ಪಿಎ ಮಹೇಶ್ ಮೊಬೈಲ್ ಮೊಬೈಲ್ ಕರೆಗಳ ಮಾಹಿತಿ, ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್ ಚಾಟಿಂಗ್ ಹಿಸ್ಟರಿ ಹಾಗೂ ಜಿ-ಮೇಲ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮೊಬೈಲ್ ಫೋನ್ ನ ಗ್ಯಾಲರಿಯಲ್ಲಿರುವ ಸಿಕ್ರೆಟ್ ಫೋಲ್ಡರ್ಗಳಲ್ಲಿರುವ ಪೋಟೋ ಮತ್ತು ವೀಡಿಯೋಗಳ ಪರಿಶೀಲನೆಯನ್ನೂ ನಡೆಸುತ್ತಿದ್ದಾರೆ.
ಅವರುಗಳು ಬರ್ತಡೇ ಪಾರ್ಟಿ ಸೇರಿ ವಿವಿಧ ಪಾರ್ಟಿಗಳಲ್ಲಿ ಭಾಗಿಯಾಗಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿರುವ ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಪಾರ್ಟಿ ಮಾಡಲಾಗಿತ್ತು? ಪಾರ್ಟಿಗಳ ಉದ್ದೇಶವೇನು? ಪಾರ್ಟಿಗಳಲ್ಲಿ ಯಾರೆಲ್ಲಾ ಭಾಗಿಯಾಗುತ್ತಿದ್ದರು? ಎಂಬ ಬಗ್ಗೆಯೂ ವಿವಿಧ ಆಯಾಮಗಳಲ್ಲಿ ಪೊಲೀಸರು ಪ್ರಶ್ನೆಗಳನ್ನು ಹಾಕಿ ತನಿಖೆ ನಡೆಸುತ್ತಿದ್ದಾರೆ.
ನಟಿ ಸವಿ ಮಾದಪ್ಪ ವಾಸ್ತವ್ಯವಿದ್ದ ಕುಂಬಳಗೋಡಿನಲ್ಲಿರುವ ಸನ್ ವರ್ತ್ ಅಪಾರ್ಟ್ಮೆಂಟ್ನ 5E ಬ್ಲಾಕ್ನ ಫ್ಲಾಟ್ ನ ನಂ.901ಕ್ಕೆ ಆಗಮಿಸಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ ನಟಿಯ ತಂದೆ ಪ್ರಭು ಮಾದಪ್ಪ ಮತ್ತು ಆಕೆಯ ಸಹೋದರ ಕೂಡಾ ಅಲ್ಲಿದ್ದರು. ಮಹಜರು ವೇಳೆ ಆರೋಪಿ ಮಹೇಶ್ನನ್ನು ಪೊಲೀಸರು ಕರೆದುಕೊಂಡು ಬಂದಿದ್ದರು.