
'ಆಸೆ ಪೂರೈಸು' ಎಂದು ಕಾಟ ನೀಡುತ್ತಿದ್ದ ಆರೋಪಿಯಿಂದ ಬೇಸತ್ತು ಅಪ್ರಾಪ್ತೆ ಆತ್ಮಹತ್ಯೆ
Wednesday, October 6, 2021
ಖಮ್ಮಂ: ವಿವಾಹಿತ ಯುವಕನೋರ್ವನು ಪ್ರೀತಿಯ ಹೆಸರಿನಲ್ಲಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಅಪ್ರಾಪ್ತೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.
ಖಮ್ಮಂ ಜಿಲ್ಲೆಯ ತಲ್ಲಡಾ ಗ್ರಾಮದ ನಿವಾಸಿ ಕುಸುಮರಾಜು ವರ್ಷಿತಾ (17) ಮೃತಪಟ್ಟ ದುರ್ದೈವಿ.
ವರ್ಷಿತಾ ತನ್ನ ತಂದೆಯ ಮರಣದ ಬಳಿಕ ಕುಟುಂಬ ನಿರ್ವಹಣೆಗೆ ನೆರವಾಗಲು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತಿರುವೂರ್ ಮಂಡಲದ ಮುನುಕೋಲಾ ನಿವಾಸಿ ಮಲ್ಲವರಪು ಮಧುಕುಮಾರ್ ಎಂಬಾತ ಆತನನ್ನು ಪ್ರೀತಿ ಮಾಡುವಂತೆ ವರ್ಷಿತಾನನ್ನು ಸದಾ ಪೀಡಿಸುತ್ತಿದ್ದ. ಅಲ್ಲದೆ, ತನ್ನ ಆಸೆಗಳನ್ನು ಪೂರೈಸು ಎಂದು ಕಾಡುತ್ತಿದ್ದ. ಅಲ್ಲದೆ ಸ್ವಲ್ಪ ಸಮಸ್ಯೆಯಿದೆ ಎಂದು ಹೇಳಿ ಆಕೆಯಿಂದ ಹಣವನ್ನು ಪಡೆದುಕೊಂಡಿದ್ದ. ಆ ಬಳಿಕವೂ ಆತನ ಕಿರುಕುಳ ಮುಂದುವರಿದಿತ್ತು.
ಇದರಿಂದ ಬೇಸತ್ತ ವರ್ಷಿತಾ ಆ ಕೆಲಸ ಬಿಟ್ಟು ಬೇರೊಂದು ಆಸ್ಪತ್ರೆಗೆ ಸೇರಿದ್ದಳು. ಆದರೆ ಆರೋಪಿ ಮಧುಕುಮಾರ್ ಆ ಬಳಿಕವೂ ತನ್ನ ಚಾಳಿ ಮುಂದುವರಿಸಿದ್ದ. ಪದೇ ಪದೇ ಕರೆ ಮಾಡುತ್ತಿದ್ದ ಮಧುಕುಮಾರ್, ತನ್ನ ಆಸೆಗಳನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದ. ಇಲ್ಲವಾದಲ್ಲಿ ತನ್ನೊಂದಿ ಮಾತನಾಡಿದ್ದ ಕಾಲ್ ರೆಕಾರ್ಡ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದ.
ಪರಿಣಾಮ ಮನನೊಂದಿದ್ದ ವರ್ಷಿತಾ ಗೆಳತಿಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿದ್ದಾಳೆ. ವರ್ಷಿತಾ ಕರೆಯನ್ನು ಮಾಡಿದ ಬೆನ್ನಲ್ಲೇ ಆಕೆಯ ಗೆಳತಿ ವರ್ಷಿತಾ ತಾಯಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ವರ್ಷಿತಾ ಇದ್ದಲ್ಲಿಗೆ ಹೋಗಿ ನೋಡಿದಾಗ ಮಗಳು ಶವವಾಗಿ ಪತ್ತೆಯಾಗಿದ್ದಾಳೆ.
ಈ ಬಗ್ಗೆ ತಕ್ಷಣ ವರ್ಷಿತಾ ತಾಯಿ ಖಮ್ಮಂಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತ ವರ್ಷಿತಾ ಮೃತದೇಹದ ಪಕ್ಕದಲ್ಲಿ ವಿಷದ ಇಂಜಕ್ಷನ್ ದೊರಕಿದ್ದು, ಆಕೆ ವಿಷದ ಇಂಜಕ್ಷನ್ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಂಕಿಸಲಾಗಿದೆ. ವರ್ಷಿತಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ಆರೋಪಿ ಮಧುಕುಮಾರ್ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.