
ಪ್ರೀತಿಯ ಉತ್ಸಾಹ ಮದುವೆಯ ಬಳಿಕ ಮುಂದುವರಿಯಲೇ ಇಲ್ಲ: ಇದು ಸುಂದರ ಜೋಡಿಯೊಂದು ಜೀವನಕ್ಕೆ ಇತಿಶ್ರೀ ಹಾಡಿದ ದುರಂತ ಕಥೆ
Friday, October 29, 2021
ಶ್ರೀಕಾಕುಳಂ: ಇಬ್ಬರೂ ಸುಶಿಕ್ಷಿತರು, ನಡುವೆ ಸಾಕಷ್ಟು ಪ್ರೀತಿಯಿತ್ತು, ಜೊತೆಗೆ ಮದುವೆಯೂ ಮಾಡಿಕೊಂಡಿದ್ದರು. ಆದರೆ ಮದುವೆಯಾಗಿ ಎರಡು ತಿಂಗಳೊಳಗೆ ಹೆಣವಾಗಿ ಮಲಗಿದ್ದರು. ಸರಿ ಯಾವುದು ತಪ್ಪು ಯಾವುದೆಂದು ವಿವೇಚನಾ ಸಾಮರ್ಥ್ಯ ಇದ್ದರೂ, ಈ ಇಬ್ಬರೂ ದುಡುಕಿನ ನಿರ್ಧಾರದಿಂದ ಆತ್ಮಹತ್ಯೆಯ ಹಾದಿ ಹಿಡಿದಿರುವುದು ನಿಜಕ್ಕೂ ಆಘಾತಕಾರಿ ವಿಚಾರ.
ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬುಧವಾರ ನಡೆದಿದೆ. ಹರೀಶ್ (29) ಹಾಗೂ ರೇಣುಕಾ ದಿವ್ಯಾ (20) ಮೃತ ದಂಪತಿ. ಇಬ್ಬರೂ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಾರಣ ನಿಗೂಢವಾಗಿದ್ದು, ತನಿಖೆಯ ಬಳಿಕ ತಿಳಿದುಬರಬೇಕಿದೆ.
ಶ್ರೀಕಾಕುಳಂ ಠಾಣಾ ಸಬ್ ಇನ್ಸ್ಪೆಕ್ಟರ್ ಶೇಖ್ ಮೊಹಮ್ಮದ್ ಅಲಿ ಪ್ರಕಾರ ಮೃತ ಹರೀಶ್, ಶ್ರೀಕಾಕುಳಂ ಜಿಲ್ಲೆಯ ತನಿವಾಡ ಗ್ರಾಮದ ನಿವಾಸಿ. ಎಂಸಿಎ ಪದವೀಧರನಾದ ಈತ ಅದೇ ಗ್ರಾಮದ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ರೇಣುಕಾ ದಿವ್ಯಾಳನ್ನು ಪ್ರೀತಿಸುತ್ತಿದ್ದ.
ಇಬ್ಬರು ಒಂದೇ ಗ್ರಾಮದವರಾದ್ದರಿಂದ ಇಬ್ಬರ ನಡುವೆ ಪರಿಚಯವಿತ್ತು. ಜೊತೆಗೆ ಒಂದೇ ಸಮುದಾಯದವರಾದ್ದರಿಂದ ಪರಿಚಯ ಪ್ರೀತಿಗೆ ತಿರುಗಿತ್ತು. ಕಳೆದ ಸೆಪ್ಟೆಂಬರ್ 1ರಲ್ಲಿ ಇಬ್ಬರ ಮದುವೆ ಸರಳವಾಗಿ ದೇವಸ್ಥಾನದಲ್ಲೇ ನಡೆದಿತ್ತು.
ಮದುವೆಯ ಬಳಿಕ ಇಬ್ಬರೂ ಕೆಲಸ ಹುಡುಕಾಟ ಮಾಡಿಕೊಂಡು ಎರಡು ದಿನಗಳ ಹಿಂದೆ ವಿಶಾಖಪಟ್ಟಣಕ್ಕೆ ಬಂದಿದ್ದರು. ಪರಿಚಯಸ್ಥರ ಮನೆಯಲ್ಲೇ ಉಳಿದುಕೊಂಡಿದ್ದರು. ಬುಧವಾರ ಏನಾಯಿತೋ ಇಬ್ಬರ ಮೃತದೇಹ ಮನೆಯ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಸಾವಿಗೆ ಕಾರಣ ಏನೆಂದು ತಿಳಿಯಲು ತನಿಖೆ ಚುರುಕುಗೊಳಿಸಿದ್ದಾರೆ.