
ಶ್ರೀಮಂತನಿಗೆ ಮಗಳನ್ನು ವಿವಾಹ ಮಾಡಿದ ಕುಟುಂಬಕ್ಕೀಗ ಬರ ಸಿಡಿಲೇ ಬಡಿದಂತಾಗಿದೆ: ಅಂತದ್ದೇನು ನಡೆದಿದೆ?
Saturday, October 9, 2021
ಗದಗ: ತಮ್ಮ ಮನೆಯ ಮಗಳಾದರೂ ಶ್ರೀಮಂತನನ್ನು ಮದುವೆಯಾಗಿ ಸುಖವಾಗಿದ್ದಾಳಲ್ಲ ಎಂದು ಸಂತೋಷದಿಂದಿದ್ದ ಕುಟುಂಬಕ್ಕೀಗ ಬರಸಿಡಿಲು ಬಡೆದಂತಾಗಿದೆ. ಮದುವೆಯಾಗಿ ಕೇವಲ ಐದು ತಿಂಗಳಾಗಿದ್ದು, ನಾಲ್ಕು ತಿಂಗಳ ಗರ್ಭಿಣಿ ಬೇರೆ. ಇದೀಗ ಆಕೆ ಶವವಾಗಿ ಮಲಗಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಐದು ತಿಂಗಳ ಹಿಂದಷ್ಟೇ ಗಜೇಂದ್ರಗಡ ಪಟ್ಟಣದ ಕಡ್ಡಿ ಪ್ಲಾಟ್ ನಿವಾಸಿ ಲೋಕೇಶ್ ರಾಠೋಡ್ ಜೊತೆಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿಕ್ಕಕೊಡಲಗಿ ತಾಂಡಾ ನಿವಾಸಿ ನಿರ್ಮಲಾ ಎಂಬ ಯುವತಿಯನ್ನು ವಿವಾಹ ಮಾಡಿ ಕೊಡಲಾಗಿತ್ತು. ಲೋಕೇಶ್ ರಾಠೋಡ್ ಶಿಕ್ಷಕನಾಗಿದ್ದು, ಮದುವೆಯಾಗಿ ನಿರ್ಮಲಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಇನ್ನೇನು ಸೀಮಂತಕ್ಕೆ ತಯಾರಿ ಮಾಡುವ ಹುಮ್ಮಸ್ಸಿನಲ್ಲಿದ್ದ ನಿರ್ಮಲಾ ಕುಟುಂಬಸ್ಥರಿಗೆ ಈಗ ಬರ ಸಿಡಿಲೇ ಬಡಿದಂತಾಗಿದೆ. ಮುದ್ದಾದ ಮಗಳು ಶುಕ್ರವಾರ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮದುವೆಯಾದ ಹೊಸದರಲ್ಲಿ ಲೋಕೇಶ್ ಹಾಗೂ ನಿರ್ಮಲಾ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚಿಗೆ ಪತಿ-ಪತ್ನಿ ನಡುವೆ ಬಿರುಕು ಉಂಟಾಗಿತ್ತಂತೆ. ಆಗಾಗ ಪತಿ ತನ್ನೊಂದಿಗೆ ಜಗಳ ಮಾಡುತ್ತಿದ್ದಾನೆ. ನಮ್ಮ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವಿಚಾರವನ್ನು ಸ್ವತಃ ನಿರ್ಮಲಾ ತಮ್ಮ ಸಹೋದರನ ಮುಂದೆ ಹೇಳಿಕೊಂಡಿದ್ದಳಂತೆ. ಅಷ್ಟೇ ಅಲ್ಲದೆ ಆಕೆಯ ಆತ್ಮಹತ್ಯೆ ಕುರಿತು ಹಲವಾರು ಅನುಮಾನ ವ್ಯಕ್ತವಾಗಿದೆ ಎಂದು ಕುಟುಂಬ ಹೇಳುತ್ತಿದೆ.
ತಕ್ಷಣ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.