
'ನನ್ನ ಬ್ಯಾನರ್ ಹಾಕಿ ನನಗೆ ಶ್ರದ್ಧಾಂಜಲಿ ಕೋರಿ' ಎಂದು ವಾಟ್ಸ್ಆ್ಯಪ್ ಮೆಸೇಜ್ ಮಾಡಿ ಕೆರೆಗೆ ಹಾರಿ ಮೃತಪಟ್ಟ ವಿದ್ಯಾರ್ಥಿ
Wednesday, October 27, 2021
ಕೋಲಾರ: ‘ಮಿಸ್ ಯು ಫ್ರೆಂಡ್ಸ್, ಐ ಆ್ಯಮ್ ಗೋಯಿಂಗ್ ಟು ರಿಪ್, ನನ್ನ ಬ್ಯಾನರ್ ಹಾಕಿ' ಎಂದು ಸ್ನೇಹಿತರ ವಾಟ್ಸ್ಆ್ಯಪ್ ಗ್ರೂಪ್ಗೆ ಮೆಸೇಜ್ ಕಳುಹಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಕೋಲಾರ ತಾಲೂಕಿನ ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಿಶೋರ್ ಕುಮಾರ್ (17) ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡವರು.
ಕಿಶೋರ್ ಕುಮಾರ್ ಮಂಗಳವಾರ ಸಂಜೆ ಸ್ನೇಹಿತರ ವಾಟ್ಸ್ಆ್ಯಪ್ ಗ್ರೂಪ್ಗೆ ಕೆರೆಯ ಫೋಟೋ ಕಳುಹಿಸಿ, ಸ್ನೇಹಿತರಿಗೆ ‘ಮಿಸ್ ಯೂ ಫ್ರೆಂಡ್ಸ್. ನಾನು ಸಾಯುತ್ತಿದ್ದೇನೆ. ನನ್ನ ಬ್ಯಾನರ್ ಹಾಕಿ ನನಗೆ ಶ್ರದ್ಧಾಂಜಲಿ ಕೋರಿ’ ಎಂದು ಮೆಸೇಜ್ ಮಾಡಿದ್ದಾನೆ.
ತಕ್ಷಣ ಸ್ನೇಹಿತರು, ‘ಯಾಕೋ ಹೀಗೆಲ್ಲ ಹೇಳ್ತಿಯಾ? ಕಾಲೇಜಿಗೆ ಬಾರೋ’ ಎಂದು ಮರು ಸಂದೇಶ ಕಳುಹಿಸಿದ್ದಾರೆ. ಆದರೆ ಆ ಬಳಿಕ ಕಿಶೋರ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಾದರೂ ಪ್ರಯೋಜನ ಆಗಲಿಲ್ಲ. ಅಷ್ಟರಲ್ಲಿ ಕಿಶೋರ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದ.
ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬುಧವಾರ ಬೆಳಗ್ಗೆ ಕಿಶೋರ್ ಕುಮಾರ್ ಮೃತದೇಹವನ್ನು ಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.