
ಫೇಸ್ಬುಕ್, ವ್ಯಾಟ್ಸ್ಆ್ಯಪ್, ಇನ್ ಸ್ಟಾಗ್ರಾಂ ಸ್ಥಗಿತ; ಟೆಲಿಗ್ರಾಂನತ್ತ ಹೊರಳಿದ ಜಾಲತಾಣಿಗರು
Thursday, October 7, 2021
ನವದೆಹಲಿ: ಜನಪ್ರಿಯ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂ ಜಾಲತಾಣಗಳು ಅ.3ರ ರಾತ್ರಿ 9 ಗಂಟೆಯಿಂದ ಜಗತ್ತಿನಾದ್ಯಂತ ಏಕಾಏಕಿ ನಿಷ್ಕ್ರಿಯವಾಗಿತ್ತು. ಆ ಬಳಿಕ ಅಂದು ಮಧ್ಯರಾತ್ರಿ ಸುಮಾರು 2:30 ಗಂಟೆಯಿಂದ ಮತ್ತೆ ಮರು ಚಾಲನೆಗೊಂಡಿದ್ದವು. ಇದು ಡಿಎನ್‌ಎಸ್ ಸರ್ವರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯ ಕಾರಣದಿಂದ ಆಗಿತ್ತು ಎಂಬ ಸ್ಪಷ್ಟನೆಯೂ ದೊರಕಿತ್ತು.
ಆದರೆ, ಇದೇ ಅವಧಿಯಲ್ಲಿ ಮತ್ತೊಂದು ಮಹತ್ತರವಾದ ಬದಲಾವಣೆ ನಡೆದಿದೆ. ಅಂದರೆ ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂಗೆ 7 ಕೋಟಿ ಗ್ರಾಹಕರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ಮೂರು ಪ್ರಮುಖ ಜಾಲತಾಣಗಳು ನಿಷ್ಕ್ರಿಯವಾದಾಗಲೂ ಟೆಲಿಗ್ರಾಂ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಅಲ್ಲದೆ, ಟೆಲಿಗ್ರಾಂ ಜಾಲತಾಣವು ವಾಟ್ಸ್‌ಆ್ಯಪ್‌ಗೆ ಸಮನಾದ ಜಾಲತಾಣವಾಗಿರುವುದರಿಂದ ವಿಶ್ವದ ಅನೇಕರು ತಮ್ಮ ಸಂದೇಶ, ಚಿತ್ರಗಳು, ವೀಡಿಯೋಗಳನ್ನು ತಮಗೆ ಬೇಕಾದವರಿಗೆ ರವಾನಿಸಲು ಟೆಲಿಗ್ರಾಂನತ್ತ ಹೊರಳಿದ್ದಾರೆ. ಟೆಲಿಗ್ರಾಂನ ಮಾಸಿಕ ಬಳಕೆದಾರರ ಸಂಖ್ಯೆ ಸರಾಸರಿ 50 ಕೋಟಿಯಾಗಿದ್ದು, ಇದರ ಶೇ.10ರಷ್ಟು ಹೊಸ ಗ್ರಾಹಕರು ಕೇವಲ ಆ ಐದಾರು ಗಂಟೆಗಳಲ್ಲಿ ಟೆಲಿಗ್ರಾಂಗೆ ದೊರಕಿದ್ದಾರಂತೆ.
ಈ ಮೂಲಕ ಸಾಮಾಜಿಕ ಜಾಲತಾಣಗಳ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಒಂದು ನಿಷ್ಕ್ರಿಯಗೊಂಡಲ್ಲಿ ಮತ್ತೊಂದು ವ್ಯವಸ್ಥೆಗೆ ಹೇಗೆ ಲಾಭವಾಗುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ.