
ಉತ್ತರಾಖಂಡದಲ್ಲಿ ಮಳೆ ಅವಾಂತರ: ಮಳೆಗೆ ಕೊಚ್ಚಿಕೊಂಡು ಬಂಡೆಗಳ ಮಧ್ಯೆ ಸಿಲುಕಿದ ಕಾರಲ್ಲಿದ್ದವರ ರಕ್ಷಣೆ
Wednesday, October 20, 2021
ಉತ್ತರಾಖಂಡ: ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಗೆ 2 ದಿನದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಮಳೆಯಿಂದ ಸೃಷ್ಟಿಯಾಗಿರುವ ಭಾರೀ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಭೂಕುಸಿತದಿಂದ ಕೊರೆದುಹೋಗಿರುವ ಪ್ರದೇಶದಲ್ಲಿರುವ ಬಂಡೆಗಳ ಮಧ್ಯೆ ಈ ಕಾರು ಸಿಲುಕಿಕೊಂಡಿತ್ತು. ಬಳಿಕ ಕಾರನ್ನು ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಸಿಬ್ಬಂದಿ ಭೋರ್ಗರೆದು ಹರಿಯುತ್ತಿರುವ ನೀರಿನಿಂದ ಜೆಸಿಬಿ ಮೂಲಕ ಕಾರನ್ನು ಮೇಲಕ್ಕೆತ್ತಿ ಪ್ರಯಾಣಿಕರನ್ನು ಕಾಪಾಡಿದ್ದಾರೆ. ಬದರೀನಾಥ ರಾಷ್ಟ್ರೀಯ ಹೆದ್ದಾರಿಯ ಬಳಿ ಈ ಘಟನೆ ನಡೆದಿದ್ದು, ಕಾರನ್ನು ಮೇಲಕ್ಕೆತ್ತುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಕರೆ ಮಾಡಿ, ಮಳೆಯ ಅವಾಂತರಗಳ ಬಗ್ಗೆ ಮಾಹಿತಿ ಪಡೆದು, ಕೇಂದ್ರ ಸರ್ಕಾರದಿಂದ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರ ನಡುವೆ ಉತ್ತರಾಖಂಡದ ಪ್ರವಾಹ ಮತ್ತು ಭೂಕುಸಿತದ ಆಘಾತಕಾರಿ ವೀಡಿಯೋಗಳು ಟ್ವಿಟ್ಟರ್ನಲ್ಲಿ ಹರಿದಾಡುತ್ತಿದ್ದು, ದೃಶ್ಯಾವಳಿಗಳು ನೋಡುವಾಗ ಎದೆ ಝಲ್ಲೆನಿಸುತ್ತದೆ.
ಉತ್ತರಾಖಂಡದ ಪ್ರವಾಹ ಸ್ಥಿತಿ ಗಂಭೀರವಾಗುತ್ತಲೇ ಇದ್ದು, ಪ್ರಧಾನಿ ಮೋದಿಯವರು ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿಯೊಂದಿಗೆ ಮಾತನಾಡಿದ್ದಾರೆ. ಅಲ್ಲದೆ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ನೆರವಿನ ಹಸ್ತ ಚಾಚುವ ಭರವಸೆಯನ್ನು ನೀಡಿದ್ದಾರೆ. ಪ್ರವಾಹ ಪರಿಸ್ಥಿತಿಯ ಬಗ್ಗೆ ಸಿಎಂ ಧಾಮಿ ಪ್ರಧಾನಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.
ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದು, ನೇಪಾಳದ ಕಾರ್ಮಿಕರು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ. ಪರಿಸ್ಥಿತಿ ಸಮಸ್ಥಿತಿಗೆ ಬರುವವರೆಗೂ ಹಿಮಾಲಯದ ದೇವಸ್ಥಾನಗಳಿಗೆ ತೆರಳದಂತೆ ಅಧಿಕಾರಿಗಳು ಚಾರ್ಧಾಮ್ ಯಾತ್ರಿಕರಿಗೆ ಮುನ್ಸೂಚನೆ ನೀಡಿದ್ದಾರೆ. ಹಿಮಾಲಯದ ತಪ್ಪಲಿನ ದೇವಸ್ಥಾನಗಳಿಗೆ ತೆರಳುವ ವಾಹನಗಳ ಸಂಚಾರಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತಪೋವನ, ಹೃಷಿಕೇಶ, ಗಂಗೋತ್ರಿ, ಯಮುನೋತ್ರಿ, ಬದರಿನಾಥಗಳಿಗೆ ಭಕ್ತಾದಿಗಳು ಹಾಗೂ ಯಾತ್ರಾರ್ಥಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಚಂಪಾವತ್ ಜಿಲ್ಲೆಯ ಸೆಲ್ಖೋಲಾದಲ್ಲಿ ಭೂಕುಸಿತದಲ್ಲಿ ಮನೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಹಲ್ ದ್ವಾನಿ ಜಿಲ್ಲೆಯ ಗೌಲಾ ನದಿಯ ಸೇತುವೆಯಲ್ಲಿ ಬೈಕೊಂದು ಬರುತ್ತಿದ್ದು, ಇನ್ನೇನು ಮುರಿದು ಬೀಳುತ್ತಿರುವ ಸೇತುವೆಯಲ್ಲಿ ಬಾರದಿರುವಂತೆ ಬೈಕ್ ಸವಾರನಿಗೆ ಜನರು ಜೋರಾಗಿ ಕೂಗಿ ಹೇಳುತ್ತಿದ್ದರೂ ಆತನಿಗೆ ಕೇಳಿಸಿಲ್ಲ. ಕೊನೆಯ ಕ್ಷಣದಲ್ಲಿ ಬೈಕನ್ನು ಹಿಂದಕ್ಕೆ ತಿರುಗಿಸಿರುವ ಪರಿಣಾಮ ಬೈಕ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕೆಲವೇ ಕ್ಷಣಗಳ ಅಂತರದಲ್ಲಿ ಸೇತುವೆ ಮುರಿದು ಬಿದ್ದಿದೆ.
#WATCH | Uttarakhand: Occupants of a car that was stuck at the swollen Lambagad nallah near Badrinath National Highway, due to incessant rainfall in the region, was rescued by BRO (Border Roads Organisation) yesterday. pic.twitter.com/ACek12nzwF
— ANI (@ANI) October 19, 2021