ಕೇರಳದಲ್ಲಿ ಭಾರಿ ಮಳೆಗೆ ಜನ ತತ್ತರ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇಂದು ನಾಳೆ ಯೆಲ್ಲೋ ಅಲರ್ಟ್!
Saturday, October 16, 2021
ಕೇರಳ/ಕರ್ನಾಟಕ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕೇರಳದಲ್ಲಿ ನೆರೆ ಹಾವಳಿ ಉಂಟಾಗಿದೆ. ಹಲವೆಡೆ ಭೂಕುಸಿತವಾಗಿದ್ದು, ಇಂದು ಸಂಜೆ ವೇಳೆಗೆ ಕೇರಳದ ಉತ್ತರ ಭಾಗದಲ್ಲಿ ಮಳೆ ಮತ್ತಷ್ಟು ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಥೆನ್ಮಲ ಅಣೆಕಟ್ಟಿನ ಗೇಟ್ಗಳನ್ನು ತೆರೆಯಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡು ಇಂದು ಹಾಗೂ ನಾಳೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿ ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ.
ಕರ್ನಾಟಕದಲ್ಲಿ ಅ. 17ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾವೇರಿ, ಧಾರವಾಡ, ಬೆಳಗಾವಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ ಸೇರಿ ಒಟ್ಟು 16 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.