ಆತ್ಮಹತ್ಯೆಗೆ ಯತ್ನಿಸಿದ್ದ ಅರುವತ್ತೋಕ್ಲು ಗ್ರಾಪಂ ಸದಸ್ಯೆ ಮೃತ್ಯು: ಡೆತ್ ನೋಟ್ ನಲ್ಲಿ ವ್ಯಕ್ತಿಯೊಬ್ಬನ ಹೆಸರು ಉಲ್ಲೇಖ
Monday, October 18, 2021
ಮಡಿಕೇರಿ: ಜಿಲ್ಲೆಯ ಅರುವತ್ತೋಕ್ಲು ಗ್ರಾಪಂ ಸದಸ್ಯೆ ಎಚ್.ಆರ್.ರಮ್ಯಾ (28) ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ನಗರದ ಕೈಕೇರಿ ಗ್ರಾಮದ ವಾಸಿಯಾಗಿದ್ದ ಎಚ್.ಆರ್.ರಮ್ಯಾ, ಅ.11 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರಿಗೆ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಬಳಿಕ ಅವರು ತಾಯಿ ಮನೆಯಲ್ಲಿದ್ದರು. ಆದರೆ ಶನಿವಾರ ರಾತ್ರಿ ಮತ್ತೆ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ರಮ್ಯಾ ಸಹೋದರ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತ್ಮಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೊದಲ ಪತಿಯಿಂದ ದೂರವಾಗಿದ್ದ ರಮ್ಯಾರನ್ನು ಪಾಲಿಬೆಟ್ಟದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆಂದು ರಮ್ಯಾ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.