
ಉಗ್ರರ ಖಾತೆಗೆ ಗುಟ್ಟಾಗಿ ನಗದು ರವಾನಿಸುತ್ತಿದ್ದ ದಂಪತಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ: ಸಭ್ಯಳಂತಿದ್ದಾಕೆಯ ಬಣ್ಣ ಬಯಲು, ಈಕೆ ಮಾಡುತ್ತಿದ್ದುದು ಅಂತಿಂಥ ಕೃತ್ಯವಲ್ಲ
Friday, November 26, 2021
ರಾಯಪುರ (ಛತ್ತೀಸಗಢ): ನಿಷೇಧಿತ ಸಿಮಿ, ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿ ಉಗ್ರರಿಗೆ ನೆರವು ನೀಡುತ್ತಿದ್ದ ಮಂಗಳೂರಿನ ದಂಪತಿಗೆ ರಾಯಪುರದ ನ್ಯಾಯಾಲಯ 10 ವರ್ಷಗಳ ಶಿಕ್ಷೆ ವಿಧಿಸಿ ಆದೇಶಿಸಿದೆ.
ಜುಬೇರ್ ಹುಸೇನ್ (42), ಆತನ ಪತ್ನಿ ಆಯೇಷಾ ಬಾನು (39) ಶಿಕ್ಷೆಗೊಳಗಾದ ಅಪರಾಧಿಗಳು.
ಮಂಗಳೂರು ಮೂಲದ ಈ ದಂಪತಿ ಛತ್ತೀಸ್‌ಗಢ ರಾಯಪುರದಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಮಂಗಳೂರಿನಿಂದಲೇ ತಮ್ಮ ಕುಕೃತ್ಯ ಎಸಗುತ್ತಿದ್ದ ಈ ಅಪರಾಧಿ ದಂಪತಿ ಬಳಿಕ ರಾಯಪುರದಲ್ಲಿ ಸಿಕ್ಕಿಬಿದ್ದಿದ್ದರು. ಇವರ ಜೊತೆ ಇನ್ನೂ ಇಬ್ಬರು ಸಹಚರರು ಪೊಲೀಸ್ ಬಲೆಗೆ ಬಿದ್ದಿದ್ದರು. ಇದೀಗ ಇವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಯಪುರದ ಕೋರ್ಟ್ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಈ ದಂಪತಿಯು ಮಂಗಳೂರಿನಿಂದಲೇ ಈ ಕೃತ್ಯವನ್ನು ಎಸಗಲು ಆರಂಭಿಸಿದ್ದರು. ಅದರಲ್ಲಿಯೂ ಈ ಕಾರ್ಯದಲ್ಲಿ ಆಯೇಷಾಳದ್ದು ಪ್ರಮುಖ ಪಾತ್ರವಾಗಿತ್ತು. ನೆರೆಹೊರೆಯವರೊಂದಿಗೆ ಸಭ್ಯರಂತೆ ವರ್ತಿಸುತ್ತಿದ್ದ ಈಕೆ ಯಾರಿಗೂ ಅನುಮಾನ ಬಾರದಂತೆ ಚಾಕಚಕ್ಯತೆಯಿಂದ ಕೆಲಸ ಸಾಧಿಸುತ್ತಿದ್ದಳು. ಅಲ್ಲಿಂದ ಈ ದಂಪತಿ ರಾಯಪುರಕ್ಕೆ ಹೋಗಿ ಅಲ್ಲಿ ತಮ್ಮ ಕುಕೃತ್ಯ ಮುಂದುವರಿಸಿದ್ದರು. ಆದರೆ ಸುಲಭದಲ್ಲಿ ಇವರು ಸಿಕ್ಕಿಬೀಳುತ್ತಿರಲಿಲ್ಲ.
ಕರ್ನಾಟಕದಲ್ಲಿಯೂ ಉಗ್ರ ಸಂಘಟನೆಯ ಲಿಂಕ್ ಇರುವುದನ್ನು ಅರಿತಿದ್ದ ತನಿಖಾಧಿಕಾರಿಗಳು ಶಂಕಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದರು. 2013ರಲ್ಲಿ ಬೀದಿ ಬದಿಯಲ್ಲಿ ಹೋಟೆಲ್ ಇಟ್ಟಿದ್ದ ಧೀರಜ್ ಸಾವೋನನ್ನು ಎಂಬ ಉಗ್ರನನ್ನು ಬಂಧಿಸಲಾಗಿತ್ತು. ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಗಳಿಗೆ ಪಾಕಿಸ್ತಾನದ ಖಾಲಿದ್ ಎಂಬುವವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದ ಎಂಬ ವಿಚಾರ ಬಹಿರಂಗಗೊಂಡಿತ್ತು.
ಈ ಹಿನ್ನೆಲೆಯನ್ನು ಕೆದಕಿದಾಗ ಸಿಕ್ಕಿದ್ದೇ ಈ ಆಯೇಷಾ ಬಾನು ಹಾಗೂ ಆಕೆಯ ಪತಿಯ ವಿಚಾರ. ಈಕೆಯ ಬ್ಯಾಂಕ್ ಖಾತೆಗೂ ಸಹ ಧೀರಜ್ ಸಾವೋನಿಂದ ಹಣದ ವರ್ಗಾವಣೆ ಆಗುತ್ತಿತ್ತು. ಆಕೆಯ ಮೂಲ ಕೆದಕಿದಾಗ ಮಂಗಳೂರು ಮೂಲಕ ಈಕೆ ತನ್ನ ಪತಿಯ ಜತೆಗೂಡಿ ಉಗ್ರ ಕೃತ್ಯದಲ್ಲಿ ತೊಡಗಿರುವ ವಿಚಾರ ಬಯಲಾಗಿದೆ. ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜತೆ ಕೂಡ ಈಕೆ ನಂಟು ಹೊಂದಿರುವುದು ಬಹಿರಂಗವಾಯಿತು.
ಅಯೆಷಾ ಬಾನು ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಇದರ ಮೂಲಕ ಉಗ್ರರಿಗೆ ಹಣ ರವಾನಿಸುತ್ತಿದ್ದಳು. ಆದಾಯ ತೆರಿಗೆ ಇಲಾಖೆಯರಿಂದ ತಪ್ಪಿಸಿಕೊಳ್ಳಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಮೊದಮೊದಲು ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಿದಾಗ ಸಭ್ಯಳಂತೆ ಇದ್ದ ಈಕೆಯ ಬಗ್ಗೆ ಯಾರಿಗೂ ಸುಳಿವೇ ಇರದದ್ದು ತಿಳಿಯಿತು. ಕೊನೆಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದಳು. ಈ ದಂಪತಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಕೇಸ್ ದಾಖಲಾಗಿತ್ತು.