ದೆವ್ವದ ಭೀತಿಯಿಂದ 15 ದಿನ ದೇವರಕೋಣೆಯಲ್ಲಿ ಅಡಗಿ ಕುಳಿತಿದ್ದ ಪೊಲೀಸ್ ಕಾನ್ ಸ್ಟೇಬಲ್ ನೇಣಿಗೆ ಶರಣು
Thursday, November 18, 2021
ಚೆನ್ನೈ: ದೆವ್ವದ ಭೀತಿಯಿಂದ ಬೆದರಿದ ಪೊಲೀಸ್ ಕಾನ್ ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡ್ಡಲೂರು ಜಿಲ್ಲೆಯಲ್ಲಿ ನಡೆದಿದೆ.
ಕಡ್ಡಲೂರು ಜಿಲ್ಲೆಯ ಪೆರುಂಬಕ್ಕಮ್ ಮೂಲದ ಪ್ರಭಾಕರನ್ (33) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ ಸ್ಟೇಬಲ್.
ಕಡ್ಡಲೂರು ಸಶಸ್ತ್ರ ಪಡೆಯಲ್ಲಿ ಫಸ್ಟ್ ಗ್ರೇಡ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾಕರನ್ ಪೊಲೀಸ್ ಕ್ವಾಟ್ರಸ್ನಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದರು. ವಿಷ್ಣುಪ್ರಿಯಾ ಎಂಬುವರನ್ನು ವಿವಾಹವಾಗಿದ್ದ ಪ್ರಭಾಕರನ್ಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಭಾಕರನ್ ಪತ್ನಿ ವಿಷ್ಣುಪ್ರಿಯಾ ಹಾಗೂ ಮಕ್ಕಳು ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೆಲ್ಪಟ್ಟಂಬಕ್ಕಮ್ ಎಂಬಲ್ಲಿಗೆ ತೆರಳಿದ್ದರು. ಅಲ್ಲಿಂದ ಮನೆಗೆ ಬಂದು ನೋಡಿದಾಗ ಪ್ರಭಾಕರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ನೋಡಿ ಪತ್ನಿ ಮತ್ತು ಮಕ್ಕಳು ಆಘಾತಕ್ಕೆ ಒಳಗಾಗಿದ್ದರು.
ತಕ್ಷಣ ಸ್ಥಳೀಯರು ಧಾವಿಸಿ ಪ್ರಭಾಕರ್ ಮೃತದೇಹವನ್ನು ಕೆಳಗಿಳಿಸಿ, ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿರುವ ಕಡ್ಡಲೂರು ನ್ಯೂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಭಾಕರನ್ ಸಹೋದ್ಯೋಗಿಗಳ ಪ್ರಕಾರ, ದೆವ್ವವೊಂದು ಆತನನ್ನು ಹತ್ಯೆಮಾಡಲು ಬಂದಿರುವುದಾಗಿ ಹೇಳಿಕೊಂಡಿದ್ದರಂತೆ. ಸಶಸ್ತ್ರ ಪಡೆಯ ಕ್ವಾಟ್ರಸ್ನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಮೃತಪಟ್ಟಿದ್ದ ಮಹಿಳೆಯೋರ್ವಳು ದೆವ್ವವಾಗಿ ತನ್ನನ್ನು ಕೊಲ್ಲಲು ಬಂದಿದ್ದಾಳೆಂದು ಪ್ರಭಾಕರನ್ ಹೇಳಿಕೊಂಡಿದ್ದರಂತೆ. 15 ದಿನಗಳ ಕಾಲ ಅನಾರೋಗ್ಯ ರಜೆ ಪಡೆದುಕೊಂಡಿದ್ದ ಪ್ರಭಾಕರ್ ತಮ್ಮ ಮನೆಯ ದೇವರ ಕೋಣೆಯ ಒಳಗೆ ಬಚ್ಚಿಟ್ಟುಕೊಂಡಿದ್ದರಂತೆ. ರಜೆ ಕಳೆದು ಮರಳಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ದೆವ್ವ ಮತ್ತೆ ಹಿಂಬಾಲಿಸುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಪ್ರಭಾಕರನ್ ಸಾವಿಗೆ ಕೆಲಸದ ಹೊರೆ ಕಾರಣ ಎಂಬುದನ್ನು ಪೊಲೀಸರು ತಳ್ಳಿಹಾಕಿದ್ದಾರೆ. ದೆವ್ವ ಭಯದಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.