
ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟಿದೆ ಬರ್ತ್ ಡೇ ನೆಪದಲ್ಲಿ ವಿದ್ಯಾರ್ಥಿಗಳ ಅಮಲು ಪಾರ್ಟಿ: ಮದ್ಯದ ನಶೆಯಲ್ಲಿದ್ದ 25 ಯುವಕ ಯುವತಿಯರು ಪೊಲೀಸ್ ವಶಕ್ಕೆ
Sunday, November 14, 2021
ಹೊಸಕೋಟೆ: ನಗರ ಪ್ರದೇಶಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿದ್ದ ಗುಂಡು ತುಂಡು ಮೋಜಿನ ಬರ್ತ್ ಡೇ ಪಾರ್ಟಿಗಳು ಇದೀಗ ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟಿದೆ. ಫಾರ್ಮ್ ಹೌಸ್ ನಲ್ಲಿ ಬರ್ತ್ ಡೇ ಪಾರ್ಟಿ ನೆಪದಲ್ಲಿ ಅಮಲಿನಲ್ಲಿ ತೇಲಾಡುತ್ತಿದ್ದ ಉನ್ಮತ್ತ ಯುವಕ - ಯುವತಿಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗೇಟ್ ಸಮೀಪದ ಫಾರ್ಮ್ ಹೌಸ್‌ನಲ್ಲಿ ಈ ಘಟನೆ ನಡೆದಿದೆ. ಈ ಫಾರ್ಮ್ ಹೌಸ್ ನಲ್ಲಿ ಅಮಲು ಪಾರ್ಟಿ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕ ತಕ್ಷಣ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ಹೊಸಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದವರು ನಗರ ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳು ಬರ್ತ್ಡೇ ನೆಪದಲ್ಲಿ ಪಾರ್ಟಿ ನಡೆಯುತ್ತಿರುವುದು ಕಂಡುಬಂದಿದೆ. ಬಹುತೇಕ ಎಲ್ಲಾ ಯುವಕ ಯುವತಿಯರು ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ತ್ ಡೇ ಪಾರ್ಟಿ ಎಂದು ಸೇರಿದ ತಂಡದಲ್ಲಿ 18 ಮಂದಿ ಯುವಕರು ಹಾಗೂ 7 ಯುವತಿಯರೂ ಇದ್ದು ಎಲ್ಲರೂ ಮದ್ಯದ ಪಾರ್ಟಿಯಲ್ಲಿ ತೊಡಗಿದ್ದರು.
ಅಮಲಿನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಹೊಸಕೋಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.