ಅಪ್ರಾಪ್ತೆಯ ಅತ್ಯಾಚಾರಗೈದ 58 ವರ್ಷದ ಕಾಮುಕನಿಗೆ 20ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ
Sunday, November 21, 2021
ಹೊಸೂರು: 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಸಾಬೀತಾಗಿರುವ ಹಿನ್ನೆಲೆಯಲ್ಲಿ 58 ವರ್ಷದ ಕಾಮುಕನಿಗೆ ಕೃಷ್ಣಗಿರಿ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಕೃಷ್ಣಗಿರಿ ಜಿಲ್ಲೆಯ ಮತ್ತೂರು ಸಮೀಪದ ಶಿವಂಪಟ್ಟಿ ಗ್ರಾಮದ ಕೂಲಿ ಕಾರ್ಮಿಕ ಸುಂದರಂ (58) ಶಿಕ್ಷೆಗೊಳಗಾದ ಆರೋಪಿ. 2019ರ ಡಿಸೆಂಬರ್ 9ರಂದು 16ರ ಹರೆಯದ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದಲ್ಲಿ, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಆದರೆ ಬಾಲಕಿ ಈ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾಳೆ.
ತಕ್ಷಣ ಪಾಲಕರು ದೂರು ದಾಖಲಿಸಿದ್ದರು. ಈ ಬಗ್ಗೆ ಮತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ಸುಂದರಂನನ್ನು ಬಂಧಿಸಿ, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ನಡೆಸಿರುವ ಪೊಲೀಸರು ಕೃಷ್ಣಗಿರಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶೆ ಲತಾ, ಪ್ರಕರಣದಲ್ಲಿ ಸುಂದರಂ ದೋಷಿ ಎಂದು ತೀರ್ಪು ನೀಡಿ 20 ವರ್ಷ ಜೈಲುಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.