ಅಪಘಾನಿಸ್ತಾನ: ಕುಟುಂಬ ನಿರ್ವಹಣೆ ಸಾಧ್ಯವಾಗದೆ 9ವರ್ಷದ ಪುತ್ರಿಯನ್ನು ಮುದುಕನಿಗೆ ಮಾರಾಟ ಮಾಡಿದ ತಂದೆ
Wednesday, November 3, 2021
ಕಾಬುಲ್: ಅಫ್ಘಾನಿಸ್ತಾನವು ತಾಲಿಬಾನಿಗಳ ಕೈವಶವಾಗಿರೋದು ಹಳೆಯ ವಿಚಾರ. ಆದರೆ ತಾಲಿಬಾನಿಗಳ ಆಡಳಿತದಲ್ಲಿ ದೇಶವು ಹಿಂದೆಂದು ಕಾಣದಂತಹ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಅಫ್ಘಾನ್ ನಾಗರಿಕದ ಪರಿಸ್ಥಿತಿ ದುರ್ಬರವಾಗಿದ್ದು, ಹೆಣ್ಣು ಮಕ್ಕಳನ್ನು ಮಾರಾಟ ಮಾಡಿ ಬದುಕುವಂತಹ ದುಸ್ಥಿತಿಗೆ ಅಫ್ಘಾನ್ ದೇಶ ತಲುಪಿದೆ. ಅಫ್ಘಾನ್ನಲ್ಲಿ ಜನರು ಬಡತನ ಹಾಗೂ ಹಸಿವಿನಿಂದ ಜನರು ತತ್ತರಿಸುತ್ತಿದ್ದು, ಬದುಕು ಸಾಗಿಸಲು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಹಣಕ್ಕಾಗಿ ಮಾರಾಟ ಮಾಡುವ ಹಂತಕ್ಕೆ ಬಂದು ತಲುಪಿದೆ.
ಇದೀಗ 9 ವರ್ಷದ ಪರ್ವಾನಾ ಮಲ್ಲಿಕ್ ಎಂಬ ಅಪ್ರಾಪ್ತ ಬಾಲಕಿಯನ್ನು ಆಕೆಯ ಕುಟುಂಬ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿರುವ ಮನಕುಲವ ಘಟನೆ ವರದಿಯಾಗಿದೆ. ಭಯದ ನಾಡಾಗಿ ಬದಲಾಗಿರುವ ಅಫ್ಘಾನ್ನ ಬದ್ಘಿಸ್ ಪ್ರಾಂತ್ಯದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ನಾಗರಿಕರು ಶಿಬಿರದಲ್ಲಿ ವಾಸಿಸುತ್ತಿದ್ದಾರೆ.
ಬಾಲಕಿ ಪರ್ವಾನಾ ಮಲ್ಲಿಕ್ ಹಾಗೂ ಆಕೆಯ ಎಂಟು ಜನರ ಪರಿವಾರ ಕೂಡ ಶಿಬಿರದಲ್ಲಿತ್ತು. ಪರ್ವಾನಾ ತಂದೆ ಅಬ್ದುಲ್ ಮಲ್ಲಿಕ್ ಈಗಾಗಲೇ ತನ್ನ 12 ವರ್ಷದ ಪುತ್ರಿಯನ್ನು ಒಂದೆರಡು ತಿಂಗಳ ಹಿಂದೆ ಮಾರಾಟ ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ.
ಇದೀಗ, ಕುಟುಂಬವು ಇತರೆ ಸದಸ್ಯರ ಹೊಟ್ಟೆಪಾಡಿಗಾಗಿ ಇನ್ನೊಬ್ಬ ಪುತ್ರಿ ಪರ್ವಾನಾ ಮಲ್ಲಿಕ್ ನನ್ನು ಮಾರಾಟ ಮಾಡಿದ್ದಾರೆ. ತಾನು ಮಾಡುತ್ತಿರುವುದು ತಪ್ಪೆಂದು ತಿಳಿದಿದ್ದರೂ, ಬಡತನ ಹಾಗೂ ಹಸಿವು ತನ್ನನ್ನು ಆ ನಿರ್ಧಾರಕ್ಕೆ ತಂದು ನಿಲ್ಲಿಸಿದೆ ಎಂದು ಆಕೆಯ ತಂದೆ ತಿಳಿಸಿದ್ದಾರೆ.
ಪರ್ವಾನಾ, ಚೆನ್ನಾಗಿ ಓದಿ ಶಿಕ್ಷಕಿಯಾಗಲು ಬಯಸಿದ್ದಳಂತೆ. ಆದರೆ, ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯು ತನ್ನ ಕನಸಿಗೆ ತಣ್ಣೀರೆರಚಿದೆ. ಮುದುಕ ಪತಿಯನ್ನು ಕಟ್ಟಿಕೊಂಡು ಜೀವನದಲ್ಲಿ ಮತ್ತಷ್ಟು ಸಂಕಷ್ಟಗಳನ್ನು ಎದುರಿಸಬೇಕೆಂದು ಆಕೆ ಚಿಂತೆಯಾಗೀಡಾಗಿದ್ದಾಳೆ.
ಅಂದ ಹಾಗೆ ಪರ್ವಾನಳನ್ನು ಆಕೆಯ ತಂದೆ 2,200 ಡಾಲರ್ ಗೆ ಅಂದರೆ 2,24,694 ರೂ.ಗೆ ಮಾರಾಟ ಮಾಡಿದ್ದಾನೆ. ಇವಳು ನಿಮ್ಮ ವಧು. ದಯವಿಟ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಿ, ದಯವಿಟ್ಟು ಆಕೆಯನ್ನು ಹೊಡೆಯಬೇಡಿ ಎಂದು ಮಗಳನ್ನು ಹಣಕ್ಕೆ ವಿಕ್ರಯಿಸಿದ ಬಳಿಕ ಪರ್ವಾನಾಳ ತಂದೆ ಮುಕನ ಬಳಿ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ. ಅದಕ್ಕೆ ಪ್ರತಿಯಾಗಿ, ಆತನೂ ತಾನು ಪರ್ವಾನಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.