ಇಬ್ಬರು ಮಕ್ಕಳ ತಾಯಿ ಪ್ರೀತಿ ಬಲೆಗೆ ಬಿದ್ದಾತ ತೆತ್ತ ಬೆಲೆ ಅಂತಿಂಥದ್ದಲ್ಲ: ಇನ್ನೀಗ ಆತನ ಬಾಳು ಪೂರಾ ಕತ್ತಲೆ!
Monday, November 22, 2021
ಇಡುಕ್ಕಿ: ಪ್ರೇಯಸಿಯೇ ನಡೆಸಿರುವ ಆ್ಯಸಿಡ್ ದಾಳಿಯಿಂದ ಕೇರಳದ ಪೂಜಾಪ್ಪುರ ಮೂಲದ ಯುವಕನೋರ್ವನು ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ.
ಆ್ಯಸಿಡ್ ದಾಳಿ ನಡೆಸಿದ ಆದಿಮಲಿ ಮೂಲದ ಶೀಬಾ (35) ಎಂಬಾಕೆಯನ್ನು ಪೊಲೀಸರು ಆಕೆಯ ಪತಿಯ ಮನೆಯ ಮನೆಯಿಂದಲೇ ಬಂಧಿಸಿದ್ದಾರೆ.
ಆ್ಯಸಿಡ್ ದಾಳಿ ಪ್ರಕರಣವು ಮಂಗಳವಾರ ಇರುಂಪುಪಳಂ ಚರ್ಚ್ ಬಳಿ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಕ್ಷಣ ದಾಳಿಗೊಳಗಾಗಿರುವ ಅರುಣ್ ಎಂಬಾತನನ್ನು ಅಲ್ಲಿಯೇ ಇದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ದೃಷ್ಟಿ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಸದ್ಯ ತಿರುವನಂತಪುರಂನ ಮೆಡಿಕಲ್ ಕಾಲೇಜಿನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂಜಾಪ್ಪುರ ಮೂಲದ ಅರುಣ್ ಕುಮಾರ್ ಹಾಗೂ ಶೀಬಾ ಪರಸ್ಪರ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಚಾಟಿಂಗ್ ಮಾಡುತ್ತಾ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಆದರೆ, ಶೀಬಾಗೆ ಅದಾಗಲೇ ವಿವಾಹವಾಗಿ, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದ ಬಳಿಕ ಅರುಣ್, ಪ್ರೀತಿಗೆ ಗುಡ್ ಬೈ ಹೇಳಿದ್ದಾರೆ.
ಆದರೆ, ಶೀಬಾ ಮಾತ್ರ ತನ್ನನ್ನು ವಿವಾಹವಾಗುವಂತೆ ದುಂಬಾಲು ಬಿದ್ದಿದ್ದಾಳೆ. ಇದಾದ ಬಳಿಕ ಶೀಬಾ 2 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಬಳಿಕ ಯಾವುದೋ ವಿಚಾರವನ್ನು ಮಾತನಾಡಬೇಕೆಂದು ಹೇಳಿ ಆದಿಮಲಿಗೆ ಬರುವಂತೆ ಶೀಬಾ ಹೇಳಿದ್ದಳು. ಆಕೆ ಹೇಳಿದ್ದಲ್ಲಿಗೆ ಅರುಣ್ ಕುಮಾರ್ ಹೋದ ಬೆನ್ನಲ್ಲೇ ಶೀಬಾ ಆ್ಯಸಿಡ್ ದಾಳಿ ಮಾಡಿದ್ದಾಳೆ ಎಂದು ಅರುಣ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಆರೋಪಿತೆ ಶೀಬಾಳನ್ನು ಪೊಲೀಸರು ಆಕೆಯ ಪತಿಯ ಮನೆಯಿಂದಲೇ ಬಂಧಿಸಿದ್ದಾರೆ. ದಾಳಿಯ ವೇಳೆ ಆಕೆಯ ಕೈಗಳಿಗೂ ಆ್ಯಸಿಡ್ ಬಿದ್ದು ಸುಟ್ಟ ಗಾಯಗಳಾಗಿವೆ. ರಬ್ಬರ್ ಹೆಪ್ಪುಗಟ್ಟಿಸಲು ಬಳಸುತ್ತಿದ್ದ ಆ್ಯಸಿಡ್ನಿಂದ ಆಕೆ ಅರುಣ್ ಮೇಲೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.