ಪುನೀತ್ ರಾಜ್‍ಕುಮಾರ್ ಗೆ ಬಸವಶ್ರೀ ಪ್ರಶಸ್ತಿ: ಡಾ.ಶಿವಮೂರ್ತಿ ಮುರುಘಾ ಶರಣರಿಂದ ಘೋಷಣೆ
Friday, November 5, 2021
ಚಿತ್ರದುರ್ಗ: ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‍ಕುಮಾರ್ ಅವರಿಗೆ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ (ಮರಣೋತ್ತರ) ಯನ್ನು ನೀಡುವುದಾಗಿ ಮುರುಘಾ ಮಠ ನಿರ್ಧರಿಸಿದ್ದು, ಈ ಕುರಿತಂತೆ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಣೆ ಮಾಡಿದ್ದಾರೆ.
ಡಾ.ಶಿವಮೂರ್ತಿ ಮುರುಘಾ ಶರಣರು ಈ ಬಗ್ಗೆ ಮಾಹಿತಿ ನೀಡಿ, ಪುನೀತ್ ರಾಜ್‍ಕುಮಾರ್ ಅವರು ಬಾಲನಟರಾಗಿ ಕನ್ನಡ ಸಿನಿಮಾರಂಗವನ್ನು ಪ್ರವೇಶಿಸಿ ಬಳಿಕ ನಾಯಕ ನಟರಾಗಿ ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿದ್ದ ಇವರು ಸಾಮಾಜಿಕ ಜಾಗೃತಿ ಪ್ರಚಾರಕರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.
ಇಂತಹ ಮೇರುನಟ ಪುನೀತ್ ರಾಜ್‍ಕುಮಾರ್ ಅವರು ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಈ ನೋವನ್ನು ಅವರ ಕುಟುಂಬದವರಿಗೆ ಸಹಿಸಿಕೊಳ್ಳಲು ಬಸವಾದಿ ಪ್ರಮಥರ ಆಶೀರ್ವಾದವಿರಲಿ.
ಮಾನವೀಯ ಮೌಲ್ಯಗಳನ್ನೊಳಗೊಂಡಿದ್ದ ಪುನೀತ್ ರಾಜ್‍ಕುಮಾರ್ ಅವರ ಸಾಧನೆ ಬೃಹತ್ತಾದದ್ದು. ಸಣ್ಣ ವಯಸ್ಸಿನಲ್ಲಿಯೇ ಅವರು ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ ಎಂದು ಮುರುಘಾ ಶರಣರು ಶ್ಲಾಘಿಸಿದ್ದಾರೆ.
ಬಸವಶ್ರೀ ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಮುಂದಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಶಸ್ತಿ ವಿತರಿಸಲಾಗುವುದು. ಇದೇ ತಿಂಗಳು 10ರಂದು ಬೆಂಗಳೂರಿನ ಅವರ ಮನೆಗೆ ತೆರಳಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲಾಗುವುದು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.