
ಶಾಸಕ ನೆಹರೂ ಓಲೇಕಾರ್ ಮೊಮ್ಮಕ್ಕಳಿಬ್ಬರು ಒಂದೇ ಸ್ಥಳದಲ್ಲಿ ಆತ್ಮಹತ್ಯೆ: ತಮ್ಮನ ಹಾದಿಯನ್ನು ಹಿಡಿದ ಅಕ್ಕ!
Saturday, November 27, 2021
ಬ್ಯಾಡಗಿ: ಹಾವೇರಿಯ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಇಬ್ಬರು ಮೊಮ್ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ನಾಗರಾಜ್ (16) ಹಾಗೂ ಭಾಗ್ಯ (18) ಆತ್ಮಹತ್ಯೆ ಮಾಡಿಕೊಂಡಿರುವ ಒಡಹುಟ್ಟಿದವರು.
ಆತ್ಮಹತ್ಯ ಮಾಡಿಕೊಂಡ ಈ ಸೋದರ-ಸೋದರಿಯರು ಶಾಸಕ ನೆಹರೂ ಓಲೇಕಾರ್ ಅವರ ಸಂಬಂಧಿಕರಾದ ರೇಣುಕಮ್ಮ ಮತ್ತು ಚಂದ್ರಪ್ಪ ದಂಪತಿಯ ಮಕ್ಕಳು. ಸಂಬಂಧದಲ್ಲಿ ಇವರು ಓಲೇಕಾರ್ ಅವರಿಗೆ ಅಕ್ಕನ ಮಗನ ಮಕ್ಕಳಾಗಬೇಕು.
ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ನಾಗರಾಜ್ ಬ್ಯಾಡಗಿಯಲ್ಲಿರುವ ತಮ್ಮ ಮನೆಯಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ದಿಢೀರ್ ಸಾವಿನಿಂದ ಹಾಗ ಕುಟುಂಬಸ್ಥರ ಆಕ್ರಂದನ ನೋಡಿ ಮನನೊಂದಿರುವ ಭಾಗ್ಯಾ ಕೂಡ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ತಾನೂ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರಾಜ್ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಬ್ಯಾಡಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.