ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Monday, November 1, 2021
ಮಂಗಳೂರು: ಅರ್ಹ ಉದ್ಯೋಗಕ್ಕಾಗಿ ಹಾತೊರೆಯುವ ಬದಲು
ದೊರೆತ ಉದ್ಯೋಗ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅರ್ಹತೆಯನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಅನುಭವವನ್ನು ವೃದ್ಧಿಸಿಕೊಳ್ಳಬೇಕು. ಆ ಮೂಲಕ
ವೃತ್ತಿಯಲ್ಲಿ ಅರ್ಹತೆ ಜೊತೆಗೆ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಕ್ಯೂಸ್ಪೈಡರ್ಸ್ ಜೆ ಸ್ಪೈಡರ್ಸ್ ಆ್ಯಂಡ್ ಟೆಸ್ಟ್ ಯಂತ್ರ ಸಾಫ್ಟ್ವೇರ್ ಸೊಲ್ಯೂಶನ್ಸ್ನ ಕೋ ಫೌಂಡರ್, ಸಿಇಓ ಗಿರೀಶ್ ಹೇಳಿದರು.
ಅವರು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶನಿವಾರ ಸಂಜೆ ನಡೆದ 2021ನೇ ಸಾಲಿನ 421 ವಿದ್ಯಾರ್ಥಿಗಳ 17ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಅವರು ವಿದ್ಯಾರ್ಥಿಗಳು ಸವಾಲನ್ನು ಎದುರಿಸುವ ಮೂಲಕ ಬೆಳೆಯಬೇಕು
ಎಂದು ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಎಂ.ಅಣ್ಣಪ್ಪ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ, ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂದೀಪ್ ಪ್ರಭು ಸಂಪಾದಕತ್ವದಲ್ಲಿ ರೂಪುಗೊಂಡ ಕಾಲೇಜಿನ ಇ ವಾರ್ಷಿಕ ಸಂಚಿಕೆಯನ್ನು ಅತಿಥಿ ಗಿರೀಶ್ ಸಹಿತ ಗಣ್ಯರು ಲೊಕಾರ್ಪಣೆಗೈದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ
ಎಂ.ರಂಗನಾಥ್ ಭಟ್ , ಸಹ ಕೋಶಾಧಿಕಾರಿ ಬಸ್ತಿ ಪುರುಷೋತ್ತಮ ಶೆಣೈ, ಸದಸ್ಯರಾದ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಕೆ. ಸುರೇಶ್ ಕಾಮತ್, ಟಿ. ಗೋಪಾಲಕೃಷ್ಣ ಶೆಣೈ, ಆಡಳಿತ ಕೌನ್ಸಿಲ್ ಸದಸ್ಯ ಎಂ.ವಿನಾಯಕ್ ಕಾಮತ್ ಹಾಗೂ ಕಾಲೇಜಿನ ವಿಭಾಗ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ನೇಹಾ ಮುಧೋಳ್
ಅತಿಥಿಯನ್ನು ಪರಿಚಯಿಸಿದರು.
ವಿದ್ಯಾರ್ಥಿ ಭರತ್ ಕಾಮತ್ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ವಿಜೇತರ ಗೌರವಾರ್ಪಣೆಯನ್ನು ನಿರ್ವಹಿಸಿದರು.
ವಿದ್ಯಾರ್ಥಿನಿಯರಾದ ಕು. ಸುವಿಜ್ಞಾ ಕೆ. ಕಾರ್ಯಕ್ರಮ ನಿರ್ವಹಿಸಿ ಕು.ಅಮಿಶಾ ಪ್ರಭು ವಂದಿಸಿದರು.
ಚಿತ್ರಗಳು: Manju Neereshwallya