
ವಿಟ್ಲ: ಸಾವಿಗೆ ಕಾರಣರಾದವರ ಹೆಸರು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಪ್ರಕರಣ; ನಾಲ್ವರ ವಿರುದ್ಧ ಪ್ರಕರಣ ದಾಖಲು
Friday, November 12, 2021
ಬಂಟ್ವಾಳ: ಇಲ್ಲಿನ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೆರೆಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಆಕೆ ಬರೆದಿಟ್ಟ ಡೆತ್ ನೋಟ್ ಆಧಾರದ ಮೇಲೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಟ್ಲ ನಿವಾಸಿಗಳಾದ ಪ್ರಶಾಂತ್, ದಿನೇಶ್, ಯಶವಂತ್ ಹಾಗೂ ಕೇಪು ನಿವಾಸಿ ರಕ್ಷಿತ್ ಎಂಬ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 10ರಂದು ವಿಟ್ಲ ಕಸಬಾ ಗ್ರಾಮದ ನೇತ್ರಕೆರೆ ನಿವಾಸಿ ನಿಶ್ಮಿತಾ(22) ಎಂಬ ಯುವತಿ ನಾಪತ್ತೆಯಾಗಿದ್ದಳು. ಅದರ ಮರುದಿನ ಬೆಳಗ್ಗೆ ಮನೆ ಬಳಿಯ ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಮೆಡಿಕಲ್ ಒಂದರಲ್ಲಿ ಕೆಲಸಕ್ಕಿದ್ದ ಯುವತಿಯ ಬ್ಯಾಗ್ ಹಾಗೂ ಚಪ್ಪಲಿ ಕೆರೆಯ ಬಳಿ ಪತ್ತೆಯಾಗಿತ್ತು. ಬ್ಯಾಗ್ ನಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿತ್ತು.
ಡೆತ್ ನೋಟ್ ನಲ್ಲಿ ಕೆಲವರ ಹೆಸರು ಉಲ್ಲೇಖ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವರಿಂದಾಗಿಯೇ ತಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಆಕೆ ಬರೆದಿದ್ದಳು.
ಈ ಡೆತ್ ನೋಟನ್ನು ಆಧರಿಸಿ ಯುವತಿಯ ತಾಯಿ ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪೊಲೀಸರು ನಾಲ್ವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ, ಆರೋಪಿಗಳ ಪತ್ತೆಗೆ ತನಿಖೆ ಕಾರ್ಯಾಚರಣೆ ಆರಂಭಿಸಿದ್ದಾರೆ.