ವೃದ್ಧೆಯ ಹತ್ಯೆ ಮಾಡಿ ಲಕ್ಷಾಂತರ ರೂ. ನಗ- ನಗದು ದೋಚಿದ ಬಾಲಕರು: 'ಸಿಐಡಿ' ಸೀರಿಯಲ್ ನೋಡಿ ಕೃತ್ಯ ಎಸಗಿದ್ದಾರಂತೆ!
Friday, November 5, 2021
ಪುಣೆ: ದೃಶ್ಯ ಮಾಧ್ಯಮಗಳಲ್ಲಿ ಬರುವ ಕೆಲವೊಂದು ಕಾರ್ಯಕ್ರಮಗಳು ಮಕ್ಕಳು, ಯುವಕರ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ ಹಿರಿಯರು ಹೇಳುತ್ತಲೇ ಇರುತ್ತಾರೆ. ಇದೀಗ ಸೀರಿಯಲ್ ಗಳನ್ನು ವೀಕ್ಷಿಸಿ ಅಪರಾಧ ಕೃತ್ಯಗಳಲ್ಲಿ ತೊಡಗುವವರು ಹೆಚ್ಚಾಗಿದ್ದಾರೆ. ಇದೀಗ ಬಾಲಕರೀರ್ವರು ಸೀರಿಯಲ್ ನೋಡಿ ಇಂಥದ್ದೇ ಭಯಾನಕ ಕೃತ್ಯ ಎಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆ ನಿವಾಸಿ ಒಂಟಿಯಾಗಿ ವಾಸಿಸುತ್ತಿದ್ದ ವಯೋ ವೃದ್ಧೆಯೊಬ್ಬರನ್ನು(70) ಬರ್ಬರವಾಗಿ ಹತ್ಯೆ ಮಾಡಿ ಮನೆಯಿಂದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನು ದೋಚಲಾಗಿತ್ತು. ಪ್ರಕರಣದ ಬೆನ್ನು ಹತ್ತಿ ದೋಗಿದ್ದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ 14 ಮತ್ತು 16 ವರ್ಷದ ಇಬ್ಬರು ಮಕ್ಕಳು ಈ ಕೊಲೆಯನ್ನು ಮಾಡಿದ್ದಾರೆ.
ಯಾವ ರೀತಿ ಕೊಲೆ ಮಾಡಬೇಕು ಹಾಗೂ ಯಾರನ್ನು ಟಾರ್ಗೆಟ್ ಮಾಡಬೇಕು ಎಂಬುದರ ಬಗ್ಗೆ ಮೊದಲೇ ಪೂರ್ವಾಲೋಚನೆ ಮಾಡಿಕೊಂಡಿದ್ದ ಈ ಮಕ್ಕಳು ವೃದ್ಧೆ ಒಂಟಿಯಾಗಿದ್ದ ಅವರ ಮನೆಗೆ ನುಗ್ಗಿ ಕೊಲೆಗೈದು ಪರಾರಿಯಾಗಿದ್ದರು.
ಪೊಲೀಸರು ಶಂಕೆಯ ಮೇರೆಗೆ ಮಕ್ಕಳನ್ನು ವಿಚಾರಿಸಿದಾಗ ಅವರು ಕೊಲೆ ಮಾಡಿರುವುದು ತಾವೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಕೊಲೆ ಕೃತ್ಯಕ್ಕೆ ಸಿಕ್ಕಿರುವ ಪ್ರೇರಣೆಯ ಯಾವುದೆಂದು ತಿಳಿದು ಪೊಲೀಸರಿಗೆ ದಂಗುಬಡಿಸಿದೆ. ಅದೇನೆಂದರೆ ಹಿಂದಿಯ ಜನಪ್ರಿಯ ಕ್ರೈಂ ಥ್ರಿಲ್ಲರ್ ಷೋ ಎನಿಸಿರುವ ‘ಸಿಐಡಿ’ ನೋಡುತ್ತಿದ್ದ ಈ ಬಾಲಕರು ಅದರಿಂದ ಪ್ರೇರೇಪಣೆಗೊಂಡು ಈ ರೀತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಶೋನಲ್ಲಿ ಕೊಲೆ ಪ್ರಕರಣವನ್ನು ಸಿಐಡಿ ತಂಡ ಭೇದಿಸಿದ ಬಳಿಕ ಕೊಲೆಗಾರರು ಹೇಗೆ ಕೊಲೆ ಮಾಡಿದರು, ಯಾವ ರೀತಿ ಸ್ಕೆಚ್ ಹಾಕಿದರು, ಯಾರನ್ನು ಟಾರ್ಗೆಟ್ ಮಾಡುತ್ತಿದ್ದರು ಎಂಬ ತೋರಿಸಲಾಗಿತ್ತು. ಅದನ್ನು ನಾವು ಬಹಳ ನೋಡುತ್ತಿದ್ದೆವು. ಸುಲಭದಲ್ಲಿ ಶ್ರೀಮಂತರಾಗಬೇಂದು ಯೋಚಿಸುತ್ತಿದ್ದಾಗ ಈ ಉಪಾಯ ಬೆಸ್ಟ್ ಎನಿಸಿತ್ತು. ಅದಕ್ಕಾಗಿ ನಾವು ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿದ್ದೇವೆ ಎಂದು ಬಾಲಕರು ಬಾಯಿಬಿಟ್ಟಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.