ವಿವಾದಕ್ಕೆ ಸಿಲುಕಿದ ಬಳಿಕ ಪೆಳ್ಳಿಸಂದ ಡಿ ಸಿನಿಮಾದಲ್ಲಿ ಬ್ರೇಕ್ ಪಡೆದ ನಟಿ ಶ್ರೀಲೀಲಾ
Tuesday, November 30, 2021
ಹೈದರಾಬಾದ್: ತಮ್ಮ ಮೊದಲ ಸಿನಿಮಾದಲ್ಲಿಯೇ ಕನ್ನಡಿಗರ ಮನಗೆದ್ದಿರುವ ನಟಿ ಶ್ರೀಲೀಲಾ, ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಯಾದ ಪೆಳ್ಳಿಸಂದ ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಪಾದರ್ಪಣೆ ಮಾಡಿದ್ದರು.
ಪೆಳ್ಳಿಸಂದ ಡಿ ಸಿನಿಮಾ ಸಾಧಾರಣ ಗೆಲುವು ಪಡೆದರೂ ಶ್ರೀಲೀಲಾ ಬ್ಯೂಟಿ, ನಟನೆ ಹಾಗೂ ಡ್ಯಾನ್ಸ್ಗೆ ತೆಲುಗು ಚಿತ್ರರಂಗದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಬಿಡುಗಡೆ ಬೆನ್ನಲ್ಲೇ ವೈಯುಕ್ತಿಕ ವಿಚಾರಗಳಿಂದ ಶ್ರೀಲೀಲಾ ವಿವಾದಕ್ಕೆ ಗುರಿಯಾಗಿದ್ದರು. ಶ್ರೀಲೀಲಾ ತೆಲುಗಿನ ಖ್ಯಾತ ಉದ್ಯಮಿ ಸೂರಪನೇನಿ ಸುಭಾಕರ ರಾವ್ ಮಗಳೆಂಬ ವಿಚಾರ ಕೇಳಿ ಬರತೊಡಗಿತ್ತು.
ಆದರೆ, ಅದನ್ನು ನಿರಾಕರಿಸಿದ್ದ ಸುಭಾಕರ ರಾವ್ ಮಾಧ್ಯಮದ ಮುಂದೆ ಬಂದು "ಶ್ರೀಲೀಲಾ ನನ್ನ ಮಗಳಲ್ಲ. ನನ್ನ ಪತ್ನಿಯೊಂದಿಗೆ ಡಿವೋರ್ಸ್ ಆದ ಬಳಿಕ ಆಕೆ ಶ್ರೀಲೀಲಾಗೆ ಜನ್ಮ ನೀಡಿದ್ದಾಳೆ. ಡಿವೋರ್ಸ್ ಕೇಸ್ ಇನ್ನು ಕೋರ್ಟಿನಲ್ಲಿ ಬಾಕಿ ಇದೆ. ಶ್ರೀಲೀಲಾ ಮಾಧ್ಯಮಗಳ ಸಂದರ್ಶನದಲ್ಲಿ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದೆ ನನ್ನ ಹೆಸರು ಉಲ್ಲೇಖಿಸುತ್ತಿದ್ದಾಳೆಂದು ಆರೋಪ ಮಾಡಿದ್ದರು.
ಪೆಳ್ಳಿಸಂದ ಡಿ ಚಿತ್ರದ ಬಳಿಕ ಶ್ರೀಲೀಲಾ ಮತ್ತೆ ಎಲ್ಲೂ ಸುದ್ದಿಯಾಗಿಲ್ಲ. ಇದೀಗ ಬಂದಿರುವ ಮಾಹಿತಿ ಪ್ರಕಾರ ಚಿತ್ರರಂಗದಿಂದ ಶ್ರೀಲೀಲಾ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಅವರಿಗೆ ತೆಲುಗು ಚಿತ್ರರಂಗದಿಂದ ಸಾಕಷ್ಟು ಆಫರ್ಗಳು ಬರುತ್ತಿದೆ. ಆದರೆ ಇತ್ತ ಗಮನಕೊಡದೆ ತಮ್ಮ ಶಿಕ್ಷಣದ ಬಗ್ಗೆ ಗಂಭೀರವಾಗಿ ಗಮನ ಕೊಡುತ್ತಿದ್ದಾರಂತೆ. ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಗೆ ಶ್ರೀಲೀಲಾ ತಯಾರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ ಮೂಲದ ಶ್ರೀಲೀಲಾ ಸದ್ಯ ಪರೀಕ್ಷೆಗಾಗಿ ಮುಂಬೈನಲ್ಲೇ ಉಳಿದಿದ್ದಾರೆಂದು ಹೇಳಲಾಗಿದೆ. ತನ್ನ ಚೊಚ್ಚಲ ತೆಲುಗು ಸಿನಿಮಾ ಬಿಡುಗಡೆಯಾದ ತಕ್ಷಣ, ಅದರ ಪ್ರಚಾರವನ್ನು ಮುಗಿಸಿದ ಶ್ರೀಲೀಲಾ ಪರೀಕ್ಷೆಗೆ ತಯಾರಿ ನಡೆಸಲು ಮುಂಬೈ ನಗರಕ್ಕೆ ತೆರಳಿದರು. ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆ ಮುಗಿಸಿ ಮತ್ತೆ ಕೆಲಸಕ್ಕೆ ಮರಳಲಿದ್ದಾರೆಂದು ಸಿನಿಮಾ ಮೂಲಗಳು ತಿಳಿಸಿವೆ.
ಕೆಲ ಮೂಲಗಳ ಪ್ರಕಾರ ನಟಿ ಶ್ರೀಲೀಲಾ ಈಗಾಗಲೇ ತಮ್ಮ ಮುಂದಿನ ಸಿನಿಮಾದಲ್ಲಿ ಸ್ಟಾರ್ ನಟನ ಜತೆ ನಟಿಸಲಿದ್ದಾರೆ. ಅಲ್ಲದೆ, ಒಂದೆರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಕೂಡ ಶ್ರೀಲೀಲಾರೊಂದಿಗೆ ಮಾತುಕತೆ ನಡೆಸುತ್ತಿವೆ ಎಂದು ತಿಳಿದುಬಂದಿದೆ. ಸಿನಿಮಾ ವಿಚಾರಕ್ಕೆ ಬಂದಲ್ಲಿ ನಿರ್ದೇಶಕ ಎ.ಪಿ. ಅರ್ಜುನ್ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನಸ್ಸು ಗೆದ್ದರು. ಬಳಿಕ ಶ್ರೀ ಮುರುಳಿ ಜತೆ ಭರಾಟೆ ಚಿತ್ರದಲ್ಲಿ ನಟಿಸಿದರು. ನಿನ್ನೆ ತೆರೆಕಂಡಿರೋ ಪೆಳ್ಳಿಸಂದ ಡಿ ಚಿತ್ರದ ಮೂಲಕ ಟಾಲಿವುಡ್ಗೂ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.