ದೀಪಾವಳಿ ದಿನವೇ ನಡೆಯಿತು ದುರಂತ: ಬೈಕ್ ನಲ್ಲಿ ಹೋಗುತ್ತಿದ್ದ ತಂದೆ - ಮಗ ಪಟಾಕಿ ಸ್ಫೋಟಗೊಂಡು ಛಿದ್ರ ಛಿದ್ರ
Saturday, November 6, 2021
ಪುದುಚೇರಿ: ಚೀಲದಲ್ಲಿ ಪಟಾಕಿ ತುಂಬಿಕೊಂಡು ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದಾಗ ಏಕಾಏಕಿ ಪಟಾಕಿ ಸ್ಫೋಟಗೊಂಡು ತಂದೆ, ಮಗನ ದೇಹ ಛಿದ್ರ ಛಿದ್ರವಾಗಿರುವ ಭೀಕರ ದುರಂತ ಪುದುಚೇರಿಯ ಚಿನ್ನ ಕೊಟ್ಟಕುಪ್ಪಂ ಬಳಿ ಗುರುವಾರ ಮಧ್ಯಾಹ್ನ 1.35 ರ ಸುಮಾರಿಗೆ ನಡೆದಿದೆ.
ಪುದುಚೇರಿಯ ಅರಿಯಂಕುಪ್ಪಂ ಪಟ್ಟಣ ನಿವಾಸಿ ವಿ.ಕಲೈನೇಸನ್ (37) ಹಾಗೂ ಅವರ ಏಳು ವರ್ಷದ ಪುತ್ರ ಪ್ರದೀಪ್ ಛಿದ್ರಗೊಂಡವರು.
ವಿ.ಕಲೈನೇಸನ್ ಅವರು ತಮ್ಮ ಏಳು ವರ್ಷದ ಪುತ್ರ ಕೂನಿಮೇಡು ಗ್ರಾಮದಿಂದ ಯಮಹಾ ಬೈಕ್ ನಲ್ಲಿ ಪುದುಚೇರಿ ಕಡೆಗೆ ಹೋಗುತ್ತಿದ್ದಾಗ ಪಟಾಕಿ ಸಿಡಿದು ದುರಂತ ಸಂಭವಿಸಿದೆ.
ವಿ.ಕಲೈನೇಸನ್ ಬುಧವಾರ ಪುದುಚೇರಿಯಿಂದ ಎರಡು ಚೀಲಗಳಲ್ಲಿ ಪಟಾಕಿಗಳನ್ನು ತೆಗೆದುಕೊಂಡು ಬಂದು ಕೂನಿಮೇಡುವಿನಲ್ಲಿರುವ ತಮ್ಮ ಅತ್ತ ಮನೆಯಲ್ಲಿ ಇರಿಸಿದ್ದರು. ಗುರುವಾರ, ವಿ.ಕಲೈನೇಸನ್ ಅವರು ತಮ್ಮ ಮಗನೊಂದಿಗೆ ಬೈಕ್ ನಲ್ಲಿ ಪಟಾಕಿ ತುಂಬಿದ್ದ ಬ್ಯಾಗ್ ಗಳನ್ನು ಹಿಡಿದು ಪುದುಚೇರಿ ಕಡೆಗೆ ಹಿಂತಿರುಗಿ ಬರುತ್ತಿದ್ದರು. ಆದರೆ ದಾರಿ ಮಧ್ಯೆ ಈ ಪಟಾಕಿಗಳು ಏಕಾಏಕಿ ಸ್ಫೋಟಗೊಂಡಿವೆ. ಪರಿಣಾಮ ತಂದೆ ಮಗನ ದೇಹ ಸಂಪೂರ್ಣ ಛಿದ್ರ ಛಿದ್ರವಾಗಿದೆ. ಸ್ಫೋಟದ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ದಾಖಲಾಗಿದ್ದು ವ್ಯಾಪಕವಾಗಿ ಹರಿದಾಡುತ್ತಿವೆ.
ಪಟಾಕಿ ಸ್ಫೋಟಗೊಂಡ ಸಂದರ್ಭ ಸಮೀಪದಲ್ಲಿದ್ದ ಇತರ ಮೂವರು ಗಾಯಗೊಂಡಿದ್ದಾರೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವಿಲ್ಲುಪುರಂನ ಪೊಲೀಸ್ ವರಿಷ್ಠಾಧಿಕಾರಿ ಎನ್ ಶ್ರೀನಾಥ್ ತಿಳಿಸಿದ್ದಾರೆ.