
ಚಿಂತಾಮಣಿ ಶ್ರೀಕೋಳಾಲಮ್ಮ ದೇವಾಲಯದ ಧರ್ಮದರ್ಶಿ ಶ್ರೀಧರಮ್ಮ - ಅರ್ಚಕ ಮೃತದೇಹವಾಗಿ ಪತ್ತೆ: ಸಾವಿಗೆ ಕಾರಣ ನಿಗೂಢ
Saturday, November 13, 2021
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಆದಿಶಕ್ತಿ ಶ್ರೀ ಕೋಳಾಲಮ್ಮದೇವಿ ದೇವಸ್ಥಾನದ ಧರ್ಮದರ್ಶಿ ಮಾತೃ ಸ್ವರೂಪಿಣಿ ಶ್ರೀಧರಮ್ಮ ಹಾಗೂ ಅಲ್ಲಿನ ಅರ್ಚಕ ಲಕ್ಷ್ಮೀಪತಿ ಇಬ್ಬರೂ ಒಂದೇ ದಿನ ನಿಗೂಢವಾಗಿ ಮೃತಪಟ್ಟಿದ್ದಾರೆ. ಇದೀಗ ಇವರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ತಮ್ಮ 12ನೇ ವಯಸ್ಸಿಗೆ ದೇವರ ಆರಾಧಕರಾಗಿದ್ದ ಶ್ರೀಧರಮ್ಮನವರು ತಮ್ಮ ದೇವರ ಕಾರ್ಯಗಳಿಂದ ಅಸಂಖ್ಯಾತ ಭಕ್ತವೃಂದ ಹಾಗೂ ಶಿಷ್ಯ ವೃಂದವನ್ನು ಗಳಿಸಿದ್ದರು. ಶ್ರೀಧರ್ ಎಂಬ ಹೆಸರಿನವರಾದ ಇವರು ಮುಂದೆಮಂಗಳಮುಖಿಯಾಗಿ ಪರಿವರ್ತನೆಯಾದ ಬಳಿಕ ಶ್ರೀಧರಮ್ಮ ಎಂದೇ ಪ್ರಖ್ಯಾತರಾಗಿದ್ದರು.
ಈ ಭಾಗದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಿ, ಅಸಂಖ್ಯಾತ ಭಕ್ತರ ಪಾಲಿಗೆ ನೆಚ್ಚಿನ ಅಮ್ಮ ಕೂಡ ಆಗಿದ್ದರು. ನಿತ್ಯ ಭಕ್ತ ಸಮೂಹವನ್ನು ಸೆಳೆಯುತ್ತಿದ್ದ ಶ್ರೀಧರಮ್ಮ, ಗುಟ್ಟಹಳ್ಳಿ ಬಳಿ ಶ್ರೀ ಆದಿಶಕ್ತಿ ಕೋಳಾಲಮ್ಮದೇವಿ, ಶ್ರೀ ಮುನೇಶ್ವರಸ್ವಾಮಿ ದೇವಾಲಯ ಹೆಸರಲ್ಲಿ ಟ್ರಸ್ಟ್ ಮಾಡಿಕೊಂಡು ಭಕ್ತರ ಸೇವಾಕಾರ್ಯ ಮಾಡುತ್ತಿದ್ದರು. ಇವರೊಂದಿಗೆ ಇದೀಗ ಮೃತಪಟ್ಟ ಶಿಷ್ಯ ಲಕ್ಷ್ಮೀಪತಿ ಕೂಡ ಇದ್ದರು.
ಗುರುವಾರ ರಾತ್ರಿ ಅದೇನಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಶ್ರೀಧರಮ್ಮ ಹಾಗೂ ಲಕ್ಷ್ಮೀಪತಿ ಇಬ್ಬರೂ ಶುಕ್ರವಾರ ಬೆಳಗ್ಗೆ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಶ್ರೀಧರಮ್ಮ ಕಾವಿ ವಸ್ತ್ರವನ್ನು ಧರಿಸಿಕೊಂಡೇ ಮೃತಪಟ್ಟಿದ್ದಾರೆ. ಇದೀಗ ಇವರಿಬ್ಬರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಹಣ, ಆಸ್ತಿ, ಆಭರಣದ ವಿಚಾರಕ್ಕೆ ಜಗಳವಾಗಿ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಬೇರೆ ಯಾರಾದರೂ ಕೊಲೆ ಮಾಡಿದ್ದಾರೆಯೇ? ಎಂದು ಶಂಕಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ಪೊಲೀಸರು, ಸಾವಿನ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೂಜಾ ಕೈಂಕರ್ಯಗಳ ಮೂಲಕ ಜನರ ಕಷ್ಟ-ಸುಖಗಳಿಗೆ ಆಸರೆಯಾಗುತ್ತಿದ್ದ ಶ್ರೀಧರಮ್ಮನ ಸಂಪತ್ತು ಹಾಗೂ ಕೆಲವೊಂದು ಕಾರ್ಯಗಳೇ ಈ ಸಾವಿಗೆ ಕಾರಣವೆಂದು ಕೆಲ ಸ್ಥಳೀಯರು ಅನುಮಾನಿಸುತ್ತಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.