ಪ್ರೀತಿಸಿದಾತನೊಂದಿಗೆ ಮನೆಬಿಟ್ಟು ಓಡಿಹೋಗಿ ಮದುವೆಯಾದ ಯುವತಿ ಮೂರೇ ತಿಂಗಳಿಗೆ ಮೃತದೇಹವಾಗಿ ಪತ್ತೆ: ಕೃತ್ಯದ ಹಿಂದೆ ಜಾತಿ ನಿಂದನೆ ಆರೋಪ
Friday, November 5, 2021
ಕಲಬುರಗಿ: ಮನೆಬಿಟ್ಟು ಓಡಿ ಹೋಗಿ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದ ನವವಿವಾಹಿತೆಯೋರ್ವಳು ಮದುವೆಯಾಗಿ ಮೂರೇ ತಿಂಗಳಿಗೆ ಅನುಮಾನಾಸ್ಪದ ರೀತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾಳೆ.
ಕಲಬುರಗಿ ನಗರದ ರಾಜಾಪುರ ಬಡಾವಣೆಯ ರಮಾಬಾಯಿ(23) ಮದುವೆಯಾಗಿ ಕೇವಲ ಮೂರೇ ತಿಂಗಳಿಗೆ ಮೃತಪಟ್ಟವಳು.
ರಮಾಬಾಯಿಯು, ರಾಹುಲ್ ಎಂಬ ಯುವಕನನ್ನು ಪ್ರೀತಿಸಿದ್ದಳು. ಮನೆಯವರಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ರಾಹುಲ್, ರಮಾಬಾಯಿಯನ್ನು ಮನೆಯಿಂದ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ.
ಮದುವೆಯ ಬಳಿಕ ರಮಾಬಾಯಿ ಪತಿಯ ಮನೆಯಲ್ಲಿ ನಿತ್ಯ ಕಿರುಕುಳಕ್ಕೆ ಒಳಗಾಗಿದ್ದಳು. ಜಾತಿ ನಿಂದನೆ ಮಾಡಿ ಅತ್ತೆ-ಮಾವ ಮತ್ತು ಪತಿ ಕಿರುಕುಳ ನೀಡುತ್ತಿದ್ದರು. ನಿನ್ನೆ ಸಂಜೆ ಆಕೆ ಪತಿಯ ಮನೆಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಪತಿಯ ಮನೆಯವರೇ ಆಕೆಯನ್ನು ಕೊಲೆಗೈದಿರುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.