ಸ್ನಾನ ಮಾಡಲೆಂದು ಹೋದಾಕೆ ಬಚ್ಚಲು ಮನೆಯಲ್ಲಿ ಪ್ರಾಣ ಬಿಟ್ಟಳು: ಅಸಹಜ ಸಾವು ಎಂದು ಪೋಷಕರ ಅನುಮಾನ
Sunday, November 21, 2021
ಬೆಂಗಳೂರು: ಸ್ನಾನಕ್ಕೆಂದು ಹೋದಾಕೆ ಬಚ್ಚಲು ಮನೆಯಲ್ಲಿ ಪ್ರಾಣಬಿಟ್ಟ ವಿಚಿತ್ರ ಪ್ರಕರಣವೊಂದು ಬೆಂಗಳೂರು ಉತ್ತರ ತಾಲ್ಲೂಕು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ನಡೆದಿದೆ. ತಮ್ಮ ಪುತ್ರಿಯ ಸಾವಿನ ಬಗ್ಗೆ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಅರಕೆರೆ ಗ್ರಾಮದ ನಿವಾಸಿ ಕವಿತಾ (22) ಮೃತಪಟ್ಟ ನತದೃಷ್ಟೆ.
2 ಗಂಟೆಯಾದರೂ ಬಾತ್ರೂಮ್ ನಿಂದ ಆಕೆ ಬಾರದಿರುವುದನ್ನು ಕಂಡು ಮನೆಮಂದಿ ಬಾಗಿಲು ಮುರಿದು ನೋಡಿದಾಗ ಆಕೆ ಬಿದ್ದಿರುವುದನ್ನು ಕಂಡು ಎಲ್ಲರೂ ಶಾಕ್ ಗೆ ಒಳಗಾಗಿದ್ದಾರೆ. ಕವಿತಾ ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಸ್ನಾನ ಮಾಡಲು ತೆರಳಿದ್ದರು.
ಆದರೆ ಎರಡು ಗಂಟೆಯಾದರೂ ಅವರು ಹೊರ ಬಾರದಿರುವುದನ್ನು ಕಂಡು ಅವರ ಪತಿ ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ. ಈ ಸಂದರ್ಭ ಕವಿತಾ ನೆಲದಲ್ಲಿ ಎಚ್ಚರ ತಪ್ಪಿ ಬಿದ್ದಿರುವುದು ಕಂಡು ಬಂದಿತ್ತು. ತಕ್ಷಣ ಬಾತ್ ರೂಂ ಬಾಗಿಲು ಒಡೆದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆದರೆ ಕವಿತಾ ಪೋಷಕರು ಮಾತ್ರ ಪುತ್ರಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾದರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕವಿತಾಗೆ ನಾಲ್ಕು ವರ್ಷಗಳ ಹಿಂದೆ ಪ್ರದೀಪ್ ಜತೆ ವಿವಾಹವಾಗಿತ್ತು. ದಂಪತಿಗೆ 3 ವರ್ಷದ ಮಗಳಿದ್ದಾಳೆ. ಪತಿ-ಪತ್ನಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು ಎಂಬ ಆರೋಪವೂ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.